ಬೆಂಗಳೂರು: ಕಾನೂನು ಬದ್ಧವಾಗಿರುವ ರಾಜೀನಾಮೆಯನ್ನು ಸ್ಪೀಕರ್ ತಡ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್‍ವೈ, ಯಾವ ಶಾಸಕರ ರಾಜೀನಾಮೆ ಕಾನೂನು ಬದ್ಧವಾಗಿದೆ ಎಂದು ಸ್ಪೀಕರ್ ಹೇಳಿದ್ದಾರೋ ಅದನ್ನು ತಕ್ಷಣ ಒಪ್ಪಿಕೊಳ್ಳುವುದು ಅವರ ಕರ್ತವ್ಯ. ಕಾನೂನು ಬದ್ಧ ಇಲ್ಲದಿರುವುದನ್ನು ಶಾಸಕರು ಬಂದು ಸರಿ ಮಾಡಿಕೊಡುತ್ತಾರೆ. ಆದರೆ ಕಾನೂನು ಬದ್ಧವಾಗಿರುವ ರಾಜೀನಾಮೆಯನ್ನು ತಡ ಮಾಡುತ್ತಿರುವುದು ಸರಿಯಲ್ಲ. ರಮೇಶ್ ಕುಮಾರ್ ಲೀಗಲ್ ಅಡ್ವೈಸರ್ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಕಾನೂನು ಬದ್ಧವಾಗಿ ರಾಜೀನಾಮೆ ಸ್ವೀಕರಿಸಲಿ ಎಂದು ಒತ್ತಾಯಿಸಿದ್ದಾರೆ.
Advertisement
Advertisement
ಸಚಿವ ಡಿಕೆ ಶಿವಕುಮಾರ್ ಅವರು ಸ್ಪೀಕರ್ ಕೊಠಡಿಗೆ ಹೋಗಿ ಶಾಸಕರೊಬ್ಬರ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾರೆ. ಈ ಬಗ್ಗೆ ಸ್ಪೀಕರ್ ಏನೂ ಮಾತನಾಡಿಲ್ಲ. ಡಿಕೆಶಿ ಮುಂಬೈಗೆ ಹೋಗಿ ಸ್ನೇಹಿತನ ಮಾತನಾಡಿಸಲು ಅನುಮತಿ ನೀಡಿದ್ದರೆ ಮಾತನಾಡಲಿ, ಅದರಿಂದ ನಮಗೆ ಏನೂ ಅಭ್ಯಂತರ ಇಲ್ಲ. ಇದು ಡಿಕೆಶಿ ಹಾಗೂ ರಾಜೀನಾಮೆ ಕೊಟ್ಟ ಶಾಸಕರಿಗೆ ಸಂಬಂಧಪಟ್ಟ ವಿಷಯವಾಗಿದೆ. ಆದರೆ ಶಾಸಕನ ರಾಜೀನಾಮೆ ಪತ್ರ ಹರಿದು ಹಾಕಿದ್ದಕ್ಕೆ ಸ್ಪೀಕರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು.
Advertisement
Advertisement
ಗಾಂಧಿಚೌಕ್‍ನಲ್ಲಿ ನಮ್ಮ 105 ಶಾಸಕರು ಸೇರಿ ಧರಣಿ ಮಾಡುತ್ತಿದ್ದೇವೆ. ಬಳಿಕ 3 ಗಂಟೆಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡುತ್ತೇವೆ. ಆ ಮೊದಲು ನಾವು ರಾಜ್ಯಪಾಲರನ್ನು ಭೇಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಅತೃಪ್ತ ಶಾಸಕರನ್ನು ಭೇಟಿ ಮಾಡಲು ಮುಂಬೈಗೆ ತೆರಳಿರುವ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಪೊಲೀಸರು ಹೋಟೆಲ್ ಒಳಗಡೆ ಬಿಡಲು ನಿರಾಕರಿಸಿದ್ದಾರೆ. ಈ ವೇಳೆ ಡಿಕೆಶಿ ಜೊತೆ ಮುಂಬೈ ಪೊಲೀಸರು ಮಾತುಕತೆ ನಡೆಸುವ ಮೂಲಕ ಭಾರೀ ಹೈಡ್ರಾಮವೇ ನಡೆಯುತ್ತಿದೆ.