ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಇಂದು ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದಾರೆ. ಅಲ್ಲದೆ ಯಡಿಯೂರಪ್ಪನವರು ಮತ್ತೊಮ್ಮೆ ರಾಜ್ಯಪಾಲರ ಭೇಟಿಗೆ ತೀರ್ಮಾನ ಮಾಡಿದ್ದಾರೆ.
ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿ, ಸದ್ಯದ ರಾಜಕೀಯ ಪರಿಸ್ಥಿತಿ ಹದಗೆಟ್ಟಿದ್ದು, ಅದು ಸರಿ ಆಗುವವರೆಗೆ ತಾತ್ಕಾಲಿಕವಾಗಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡುವಂತೆ ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ರಾಜ್ಯಪಾಲರು, ರಾಷ್ಟ್ರಪತಿಗಳ ಆಳ್ವಿಕೆಗೆ ಶಿಫಾರಸ್ಸು ಮಾಡಿ, ಅದು ಜಾರಿಯಾದಲ್ಲಿ, ಮುಂದಿನ ಒಂದು ತಿಂಗಳಲ್ಲಿ ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಮಂಡಿಸುವ ಸಾಧ್ಯತೆಗಳಿವೆ.
ಸ್ಪೀಕರ್ ರಮೇಶ್ ಕುಮಾರ್ ವಿಳಂಬ ನೀತಿ ಖಂಡಿಸಿ ಬುಧವಾರ ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರು ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸಂಖ್ಯಾಬಲವನ್ನು ತೋರಿಸಿದ್ದರು. ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಬಿಎಸ್‍ವೈ, ಸಮ್ಮಿಶ್ರ ಸರ್ಕಾರದ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಮೈತ್ರಿಗೆ ಬೆಂಬಲ ನೀಡಿದ್ದ ಪಕ್ಷೇತರ ಶಾಸಕರಿಬ್ಬರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷೇತರ ಶಾಸಕರ ಬೆಂಬಲದೊಂದಿಗೆ ನಾವು ಬಹುಮತ ಹೊಂದಿದ್ದೇವೆ ಎಂಬುದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಎಂದಿದ್ದರು.
ಸರ್ಕಾರವೇ ಅಲ್ಪಮತಕ್ಕೆ ಕುಸಿದ ಕಾರಣ ಅಧಿವೇಶನ ಹೇಗೆ ನಡೆಸುತ್ತಾರೆ. ಸ್ಪೀಕರ್ ವಿಳಂಬ ನೀತಿಯನ್ನು ಅನುಸರಿಸಬಾರದು. ಸಿಎಂ ಸ್ಥಾನದಲ್ಲಿರಲು ಕುಮಾರಸ್ವಾಮಿ ಅವರಿಗೆ ಯಾವುದೇ ನೈತಿಕತೆ ಇಲ್ಲ. ಹಾಗಾಗಿ ಕೂಡಲೇ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಯಡಿಯೂರಪ್ಪ ಆಗ್ರಹಿಸಿದ್ದರು.