ಬೆಂಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ಸಮೀಪದಲ್ಲಿರುವಾಗಲೇ ಮಾಜಿ ಸಿಎಂ ಯಡಿಯೂರಪ್ಪ (B.S. Yediyurappa) ಹಾಗೂ ವಿಜಯೆಂದ್ರ (B.Y Vijayendra) ಅವರು ಪಕ್ಷದ ಪರಾಜಿತರು ಹಾಗೂ ಮಾಜಿ ಶಾಸಕರ ಸಭೆ ನಡೆಸಿ ಒಗ್ಗಟ್ಟಿನ ಜಪ ಮಾಡಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ 130ಕ್ಕೂ ಹೆಚ್ಚು ಪರಾಜಿತರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ಸುಳಿವನ್ನೂ ಕೊಡಲಾಗಿದೆ. ಸಭೆಯಲ್ಲಿ ಒಗ್ಗಟ್ಟಿನಿಂದ ಪಕ್ಷ ಸಂಘಟಿಸುವ ಪಣ ತೊಟ್ಟಿದ್ದು, ಈ ಮೂಲಕ ಮಾಜಿಗಳು ಹಾಗೂ ಪರಾಜಿತರ ವಿಶ್ವಾಸಗಳಿಸುವ ಕಸರತ್ತು ನಡೆಸಿದ್ದಾರೆ. ಈ ಮೂಲಕ ಮುಂದಿನ ಜಿ.ಪಂ ಹಾಗೂ ತಾ.ಪಂ ಚುನಾವಣೆಗೆ ಸೂಕ್ತ ತಯಾರಿಗೂ ಮುಂದಾಗಿದ್ದಾರೆ.
ಸಭೆಯಲ್ಲಿ ಪಕ್ಷದ ಒಳಗಿನ ವಿಚಾರಗಳೂ ಚರ್ಚೆಯಾಗಿದ್ದು, ಯತ್ನಾಳ್ ವಿರುದ್ಧ ಇನ್ನೂ ಶಿಸ್ತು ಕ್ರಮ ಆಗದ ಬಗ್ಗೆ ರೇಣುಕಾಚಾರ್ಯ ಆಕ್ಷೇಪಿಸಿದರು. ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಮಾತಾಡುವ ಯತ್ನಾಳ್ ವಿರುದ್ಧ ಕ್ರಮಕ್ಕೆ ಮತ್ತೆ ಹೈಕಮಾಂಡ್ ಮೇಲೆ ಒತ್ತಡ ತರಬೇಕೆಂಬ ಸಲಹೆ ಕೊಟ್ಟರು. ಇದೇ ವೇಳೆ, ಯಡಿಯೂರಪ್ಪ ಉತ್ಸವವನ್ನು ತಾವೇ ಹಣ ಹಾಕಿ ದಾವಣೆಗೆರೆಯಲ್ಲಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಭಿನ್ನರ ಬಗ್ಗೆ ಮಾತಾಡದಂತೆ ಪಕ್ಷದ ನಾಯಕರಿಗೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಯತ್ನಾಳ್ ತಂಡದ ವಿಚಾರದಲ್ಲಿ ಯಾರೂ ಬಹಿರಂಗವಾಗಿ ಮಾತಾಡಬಾರದು. ಒಬ್ಬಿಬ್ಬರು ಹಗುರವಾಗಿ ಮಾತಾಡ್ತಾರೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಎಲ್ಲವೂ ಹೈಕಮಾಂಡ್ ಗಮನದಲ್ಲಿದೆ. ಯಾರಿಗೆ ಏನು ಮಾಡ್ಬೇಕು ಎಂದು ವರಿಷ್ಠರಿಗೆ ಗೊತ್ತಿದೆ ಎಂದು ತಾಕೀತು ಮಾಡಿದ್ದಾರೆ.