ಬೆಳಗಾವಿ: ಜನಬೆಂಬಲ ಇಲ್ಲ ಎಂದು ಗೊತ್ತಾದ ಮೇಲೆ ಸಿದ್ದರಾಮಯ್ಯ ಅವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹತೋಟಿ ತಪ್ಪಿ ಮಾತನಾಡುತ್ತಿದ್ದಾರೆ. ಇದುವರೆಗೆ ನಿಮ್ಮ ಯೋಗ್ಯತೆಗೆ ಅಭ್ಯರ್ಥಿಗಳು ಯಾರು ಎಂದು ಫೈನಲ್ ಮಾಡಲಾಗಿಲ್ಲ. ಕಾಂಗ್ರೆಸ್‍ನವರಿಗೆ ದೆಹಲಿಯಲ್ಲಿ ಅಭ್ಯರ್ಥಿಗಳನ್ನು ಫೈನಲ್ ಮಾಡಲು ಆಗಿಲ್ಲ. ಜನಬೆಂಬಲ ಇಲ್ಲ ಅಂತಾ ಗೊತ್ತಾದ ಮೇಲೆ ಸಿದ್ದರಾಮಯ್ಯ ಮನಬಂದಂತೆ ಮಾತನಾಡ್ತಾರೆ. ಚುನಾವಣಾ ಫಲಿತಾಂಶ ಬಂದ ಮೇಲೆ ಅವರಿಗೂ ಗೊತ್ತಾಗುತ್ತೆ. ಏಕೆ ನೀವು ಇನ್ನೂ ನಿಮ್ಮ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿಲ್ಲ ನಿಮ್ಮ ಸ್ಥಿತಿ ಏನು? ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯದ ಭಿನ್ನಾಭಿಪ್ರಾಯದಿಂದ ಅವರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಗಿಲ್ಲ. ಹೀಗಾಗಿ ಏನು ಬೇಕೋ ಅದನ್ನು ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ‘ಅಮೃತ ಅಪಾರ್ಟ್‌ಮೆಂಟ್ಸ್’ನಲ್ಲೊಂದು ಮರ್ಡರ್ ಮಿಸ್ಟ್ರಿ ಕಥೆ ಹೇಳ ಹೊರಟ ಗುರುರಾಜ್ ಕುಲಕರ್ಣಿ
ನಾವು ಎಲ್ಲಾ ಕಡೆ ಅತಿವೃಷ್ಟಿಯಾಗಿ ಬೆಳೆ ನಾಶವಾದ ವರದಿ ತಗೆದುಕೊಳ್ಳುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಈ ವರದಿ ಕೊಡುವುದರ ಮೂಲಕ ಸಕಾಲಕ್ಕೆ ಕೇಂದ್ರದ ತಂಡ ಬಂದು ಸರ್ವೇ ಮಾಡಿ ಸಕಾಲಕ್ಕೆ ಪರಿಹಾರ ಕೊಡುವ ಕಡೆ ಗಮನ ಕೊಡ್ತಿದ್ದೇವೆ. ಈ ಕೆಲಸದ ಜೊತೆ ಜೊತೆಗೆ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.
ಎಲ್ಲಾ ಜಿಲ್ಲೆಗಳಲ್ಲಿ ಎರಡೆರಡು ಕ್ಷೇತ್ರಕ್ಕೆ ನಮ್ಮ ಮುಖಂಡರು ಹೋಗ್ತಿದ್ದಾರೆ. ಎಲ್ಲಾ ಕಡೆ ಉತ್ತಮ ಸ್ವಾಗತ ಸಿಗುತ್ತಿದೆ. ಮಂಡ್ಯ ಎರಡ್ಮೂರು ಜಿಲ್ಲೆಗಳಲ್ಲಿ ಸ್ವಲ್ಪ ಹಿನ್ನಡೆ ಇದ್ದರೂ ಅಲ್ಲಿಯೂ ಪ್ರಯತ್ನ ಮಾಡ್ತಿದ್ದೇವೆ. 25 ಸ್ಥಾನಗಳ ಪೈಕಿ 20 ಸ್ಥಾನಗಳಲ್ಲಿ ಮಾತ್ರ ನಾವು ಸ್ಪರ್ಧೆ ಮಾಡ್ತಿದೀವಿ. ಎರಡೆರಡು ಸ್ಥಾನ ಇದ್ದ ಕಡೆ ಒಂದೊಂದೇ ಸೀಟ್ ಹಾಕಿದ್ದೇವೆ. 20 ಸ್ಥಾನಗಳ ಪೈಕಿ ಕನಿಷ್ಟ 15 ಸ್ಥಾನಗಳಲ್ಲಿ ಗೆದ್ದು ಪರಿಷತ್‍ನಲ್ಲಿ ಬಹುಮತ ಯಾರ ಹಂಗಿಲ್ಲದೇ ಕೆಲಸ ಮಾಡುವಂತಹ ಅವಕಾಶ ನಮಗೆ ಸಿಗುತ್ತೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ
ಕವಟಗಿಮಠ ಅತ್ಯಂತ ಪ್ರಾಮಾಣಿಕವಾಗಿ ವಿಧಾನಪರಿಷತ್‌ನಲ್ಲಿ ಕೆಲಸ ಮಾಡಿದಂತವರು. ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಬಿಜೆಪಿಗೆ ಮತ ಹಾಕಬೇಕೆಂದು ಸಂಕಲ್ಪ ಮಾಡಿದ್ದಾರೆ. ಈ ಹಿಂದೆಯೂ ನಾನು ಹೇಳಿದಂತೆಯೇ ಆಗಿದೆ. ವಾಸ್ತವ ಸ್ಥಿತಿ ವರದಿಯಂತೆ ಕನಿಷ್ಟ 15 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ರೈತರು ಬೆಳೆನಾಶವಾಗಿದೆ ಅವರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಡಿಸಿಗಳ ಜತೆ ಸಿಎಂ ಸಭೆ ಮಾಡಿದ್ದಾರೆ. ತಕ್ಷಣ ಪರಿಹಾರ ಕೊಡುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಲಖನ್ ಜಾರಕಿಹೊಳಿಗೆ ಎರಡನೇ ಟಿಕೆಟ್ ನೀಡಲು ರಮೇಶ್ ಜಾರಕಿಹೊಳಿ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಅವರ ಜೊತೆ ಮಾತನಾಡಿ ಎಲ್ಲರ ವಿಶ್ವಾಸಕ್ಕೆ ತಗೆದುಕೊಂಡು ಮಹಾಂತೇಶ ಕವಟಗಿಮಠ ಗೆಲ್ಲಿಸುವ ಕೆಲಸ ಮಾಡ್ತೇವೆ. ವಿವೇಕರಾವ್ ಪಾಟೀಲ್ ಬಿಜೆಪಿ ಸೇರ್ಪಡೆ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.