ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ಗುರುವಾರದಿಂದ 2 ದಿನಗಳ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ಭಾಗವಹಿಸಲು ರಾಜ್ಯಾಧ್ಯಕ್ಷರಾದ ಬಿಎಸ್ ಯಡಿಯೂರಪ್ಪ ಹಾಗೂ ಕಾರ್ಯದರ್ಶಿಗಳಿಗೆ ದೆಹಲಿಗೆ ಆಗಮಿಸುವಂತೆ ಸೂಚಿಸಲಾಗಿದೆ.
ಸಭೆಯಲ್ಲಿ ಎಲ್ಲಾ ರಾಜ್ಯಗಳ ಬಿಜೆಪಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಭಾಗವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್‍ವೈ ಅವರು ದೆಹಲಿಗೆ ತೆರಳಿದ್ದಾರೆ.
ಸಭೆಯಲ್ಲಿ ರಾಜ್ಯ ಬಿಜೆಪಿ ಘಟಕಗಳಿಗೆ ಮೇಜರ್ ಸರ್ಜರಿ ನಡೆಯಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಯಡಿಯೂರಪ್ಪ ಕೈತಪ್ಪುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ ಹೆಸರನ್ನು ಬಿಎಸ್‍ವೈ ಶಿಫಾರಸು ಮಾಡಿದ್ದಾರೆ. ಆರ್‍ಎಸ್‍ಎಸ್ ಶಾಸಕ ಸಿ.ಟಿ.ರವಿ ಪರ ಬ್ಯಾಟ್ ಮಾಡುತ್ತಿದೆ ಎಂಬ ಮಾಹಿತಿ ಲಭಿಸಿದೆ.
ಇತ್ತ ಒಕ್ಕಲಿಗ ನಾಯಕ ಆರ್.ಅಶೋಕ್ ಅವರ ಹೆಸರು ಅಧ್ಯಕ್ಷರ ಸ್ಥಾನಕ್ಕೆ ಚಾಲ್ತಿಯಲ್ಲಿದೆ. ಅಲ್ಲದೇ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಸರು ಕೂಡ ರೇಸ್‍ನಲ್ಲಿ ಕೇಳಿ ಬರುತ್ತಿದೆ.