ಬೆಂಗಳೂರು: ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನ ಪರಿಷತ್‍ನಲ್ಲಿ ಮಾತನಾಡಿದ ಅವರು, ಕೃಷ್ಣ ಮೇಲ್ದಂಡೆ ಯೋಜನೆಗೆ 1 ಲಕ್ಷ ಕೋಟಿ ರೂ. ಹಣ ಬೇಕಾಗಿದೆ. ನಾನು ಪ್ರಧಾನಿ ಅವರನ್ನು ಭೇಟಿ ಮಾಡಿ ಹೆಚ್ಚುವರಿ ಹಣ ನೀಡಲು ಕೇಂದ್ರದಿಂದ ತರಲು ಪ್ರಯತ್ನ ಮಾಡುತ್ತೇನೆ. ನನ್ನ ಮೊದಲ ಆದ್ಯತೆ ನೀರಾವರಿ ಎಂದು ತಿಳಿಸಿದರು.
ರೈತನಿಗೆ ಸಂಪೂರ್ಣ ಸಹಕಾರ ನಾನು ನೀಡುತ್ತೇನೆ. ಆಗಸ್ಟ್ 2ಕ್ಕೆ ಜಿಲ್ಲಾಧಿಕಾರಿ, ಸಿಇಒಗಳ ಸಭೆ ನಡೆಸಿ ಆಡಳಿತಕ್ಕೆ ಚುರುಕು ನೀಡುತ್ತೇನೆ. ಎಲ್ಲರನ್ನು ಒಳಗೊಂಡ ನಿಯೋಗ ಪ್ರಧಾನಿ ಬಳಿಗೆ ತೆಗೆದುಕೊಂಡು ಹೋಗುತ್ತೇನೆ. ಆಡಳಿತ, ಪಕ್ಷ ವಿರೋಧ ಪಕ್ಷ ಅಂತ ಏನಿಲ್ಲ. ಅಧಿಕಾರ ಶಾಶ್ವತ ಅಲ್ಲ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಕೆಲಸ ಮಾಡುತ್ತೇನೆ. ಈ ವಾರದಲ್ಲಿ ಪ್ರಧಾನಿ, ನೀರಾವರಿ ಸಚಿವರನ್ನ ಭೇಟಿಯಾಗಿ ಹೆಚ್ಚಿನ ಅನುದಾನ, ಕೃಷ್ಣ ಮೇಲ್ದಂಡೆ ವಿಚಾರವಾಗಿ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಹಿಂದೂ, ಮುಸ್ಲಿಂ, ಕ್ರೈಸ್ತರ ಅಂತ ಬೇದ-ಭಾವ ಮಾಡದೇ ಕೆಲಸ ಮಾಡುತ್ತೇನೆ. ಯಾವ ಶಕ್ತಿಗೂ ನನ್ನ ನಿರ್ಧಾರ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಚರ್ಚೆ ನಡೆಸದೇ ಒಪ್ಪಿಗೆ ನೀಡುವುದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತ ಪಡಿಸಿದರು. ಇದಕ್ಕೆ ಜೆಡಿಎಸ್ಸಿನ ಬಸವರಾಜ ಹೊರಟ್ಟಿ, ಇದು 3 ತಿಂಗಳ ಲೇಖಾನದಾನ. ಅಮೇಲೆ ಚರ್ಚೆ ಮಾಡೋಣ ಬಿಡಿ. ಈಗ ಬಿಲ್ ಪಾಸ್ ಮಾಡಿಕೊಡಿ ಅಂತ ಆಡಳಿತ ಪಕ್ಷದ ಪರ ಬ್ಯಾಟ್ ಬೀಸಿದರು.
ಕಾಂಗ್ರೆಸ್ ವಿರೋಧದ ನಡುವೆಯೂ ಧ್ವನಿ ಮತದ ಮೂಲಕ ಹಣಕಾಸು ಮಸೂದೆ ಮತ್ತು ಪೂರಕ ಬಜೆಟ್ ಅಂಗೀಕಾರಗೊಂಡಿತು. ಬಳಿಕ ಸ್ಪೀಕರ್ ಪ್ರತಾಪ್ ಚಂದ್ರ ಶೆಟ್ಟಿ ಸದನವನ್ನು ಅನಿರ್ಧಿಷ್ಟಾವಾಧಿಗೆ ಮುಂದೂಡಿದರು.