ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ವಿರೋಧಿ ಬಣ ಗಲಾಟೆ ತಾರಕಕ್ಕೇರಿದ್ದು, ಬಿಎಸ್‍ವೈ ಬೆಂಬಲಿಗರ ಮೇಲೆ ಹಲ್ಲೆ ಮಾಡಿ ಅವರನ್ನು ಕಚೇರಿಯಿಂದ ಹೊರ ಹಾಕಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಕಚೇರಿಯ ಕಡೆ ಮತ್ತೊಮ್ಮೆ ತಲೆ ಹಾಕಿದರೆ ಸರಿ ಇರುವುದಿಲ್ಲ ಎಂದು ಬಿಎಸ್‍ವೈ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದು, ಕತ್ತಿನ ಪಟ್ಟಿ ಹಿಡಿದು ಕಚೇರಿಯಿಂದ ಅವರ ಆಪ್ತರನ್ನು ಹೊರಹಾಕಿದ್ದಾರೆ. ಕಳೆದ ವಾರ ಬಿಜೆಪಿ ಕಚೇರಿಯಲ್ಲಿ ನಾಯಕರ ಎದುರೇ ಘಟನೆ ನಡೆದಿದ್ದು, ಕಚೇರಿಗೆ ಮತ್ತೆ ಆಗಮಿಸದಂತೆ ಧಮ್ಕಿ ಹಾಕಿದ್ದಾರೆ.
Advertisement
Advertisement
ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದಾಗ ನೇಮಕ ಮಾಡಲಾಗಿದ್ದ ಸಿಬ್ಬಂದಿಯನ್ನು ಹೊರ ಹಾಕಲಾಗಿದ್ದು, ಬಿಜೆಪಿ ಕಚೇರಿಯಿಂದ ಮಾಹಿತಿ ಸೋರಿಕೆಯಾಗುವ ಶಂಕೆಯಲ್ಲಿ ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಸಿಬ್ಬಂದಿಗೆಲ್ಲ ಗೇಟ್‍ಪಾಸ್ ನೀಡಲಾಗಿದೆ. ಕರ್ನಾಟಕ ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್ ಪ್ರೋಟೋಕಾಲ್ ಸಿಬ್ಬಂದಿಯನ್ನು ಹೊರಹಾಕಿದ್ದಾರೆ. ಈ ಘಟನೆಯ ಸಂದರ್ಭದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿರುವ ಆರೋಪ ಕೂಡ ಕೇಳಿ ಬಂದಿದೆ. ಈ ಬಗ್ಗೆ ಬಿಎಸ್‍ವೈ ಅವರಿಗೆ ಸಿಬ್ಬಂದಿ ಮನವಿ ಮಾಡಿದ್ದು, ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಬಿಎಸ್‍ವೈ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Advertisement
ಸದ್ಯ ಬಿಜೆಪಿ ಕಚೇರಿಯಿಂದ ಒಟ್ಟು 9 ಮಂದಿಗೆ ಗೇಟ್ ಪಾಸ್ ನೀಡಲಾಗಿದ್ದು, ಇನ್ನು ಮುಂದೆ ಕಚೇರಿಗೆ ಬರದಂತೆ ಎಚ್ಚರಿಕೆ ನೀಡಲಾಗಿದೆ. ಸಿಬ್ಬಂದಿಯನ್ನು ಹೊರ ಹಾಕಿದ ಬಳಿಕ ಈ ಮಾಹಿತಿ ಬೆಳಕಿಗೆ ಬಂದಿದೆ. ಆದರೆ ಇದು ಹೈಕಮಾಂಡ್ ಮಟ್ಟದಲ್ಲಿ ಮಾಹಿತಿ ಇದೆಯೇ? ಅಥವಾ ರಾಜ್ಯ ನಾಯಕರ ನಡುವೆಯೇ ಈ ಮುಸುಕಿನ ಗುದ್ದಾಟ ನಡೆದಿದೇಯಾ ಎಂಬ ಅನುಮಾನ ಮೂಡಿದ್ದು, ಈ ಬಗ್ಗೆ ಬಿಎಸ್‍ವೈ ಹಾಗೂ ಬಿಜೆಪಿ ನಾಯಕರು ಯಾವ ಸ್ಪಷ್ಟನೆ ನೀಡುತ್ತಾರೆ ಎಂಬುವುದು ಕುತೂಹಲ ಮೂಡಿಸಿದೆ.
Advertisement
ಬಿಜೆಪಿ ಕಚೇರಿಗೆ ಜಾತಿ ರಾಜಕೀಯ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿದ್ದ ಬಿಎಸ್‍ವೈ ಆಪ್ತರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಯಡಿಯೂರಪ್ಪನವರ ಆಪ್ತರೆಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಗೇಟ್ ಪಾಸ್ ನೀಡಲಾಗಿದೆ. ಹಾಗೆಯೇ ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಸಿಎಂ ಬೆಂಬಲಿಗ ನಂಜುಂಡಸ್ವಾಮಿ ಆರೋಪಿಸಿದ್ದರು. ಬಹಿರಂಗವಾಗಿ ವೀಡಿಯೋದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ನಂಜುಂಡಸ್ವಾಮಿ, ಸಿಎಂ ಬೆಂಬಲಿಗರು ಎಂಬ ಕಾರಣಕ್ಕೆ ತಮ್ಮ ಪಕ್ಷದಲ್ಲಿ ಭೇದಭಾವ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದರು.
ಲಿಂಗಾಯತರು, ಯಡಿಯೂರಪ್ಪನವರು ಆಪ್ತರೆಂದು ನಮಗೆ ಬಿಜೆಪಿ ಕಚೇರಿಯಲ್ಲಿ ಪ್ರವೇಶ ನೀಡುತ್ತಿಲ್ಲ. ಈ ಹಿಂದೆ ಬಿಜೆಪಿ ಕಚೇರಿಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರನ್ನು ಕೂಡ ಕೆಲಸದಿಂದ ತೆಗೆದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇದೀಗ ಬಿಜೆಪಿ ಕಚೇರಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ನಂಜುಂಡಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
14 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ನಾನು ಕೆಲಸ ಮಾಡಿದ್ದು ಸಾರ್ಥಕವಾಯ್ತು ಎಂದುಕೊಂಡಿದ್ದೆ, ಆದ್ರೆ ಅದು ಸಾರ್ಥಕವಾಗಿಲ್ಲ. ಬಿಜೆಪಿ ನಮ್ಮ ಹೆತ್ತ ತಾಯಿ ಎಂದು ತಿಳಿದುಕೊಂಡಿದ್ದೆವು. ಆದ್ರೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಅಧ್ಯಕ್ಷರಾಗಿದ್ದಾಗ ಪಕ್ಷವನ್ನು ಬೆಳೆಸಿದರು. ಆದರೆ ಪ್ರಸ್ತುತವಾಗಿ ಬಂದಿರುವ ಅಧ್ಯಕ್ಷರು ಲಿಂಗಾಯತರನ್ನ ಟಾರ್ಗೆಟ್ ಮಾಡಿಕೊಂಡು ಸುಮಾರು 5ರಿಂದ 6 ಮಂದಿ ಕೆಲಸಗಾರರನ್ನು ತೆಗೆದು ಹಾಕಿದ್ದಾರೆ. ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಾರೆ. 14 ವರ್ಷ ನಾವು ದುಡಿದ ಶ್ರಮ ಎಲ್ಲಿ ಹೋಯ್ತು? ಬಿಎಸ್‍ವೈ ಬೆಂಬಲಿಗರು ಎಂದು ಟಾರ್ಗೆಟ್ ಮಾಡಲಾಗುತ್ತಿದೆ. ಏಕಾಏಕಿ ಕೆಲಸದಿಂದ ಕೆಲಸಗಾರರನ್ನು ತೆಗೆದು ಹಾಕಿದರೆ ಅವರು ಹಾಗೂ ಅವರ ಕುಟುಂಬದ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.
ಬಿಎಸ್‍ವೈ ಅಧ್ಯಕ್ಷರಾಗಿದ್ದಾಗ ಪಕ್ಷದಲ್ಲಿ ಎಲ್ಲಾ ಜಾತಿಯ ಸಿಬ್ಬಂದಿ ಕೂಡ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ಬರಬೇಡಿ, ನೀವು ಬರಬೇಡಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಮ್ಮನ್ನು ಪಕ್ಷಕ್ಕೆ ಸದಸ್ಯರಾಗಿ ಮಾಡಿಕೊಂಡಿದ್ದು ಯಾಕೆ? ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ ಅವರಿಗೆ ಏನು ತಿಳಿಯುತ್ತೆ? ಯಡಿಯೂರಪ್ಪ ಇಲ್ಲವಾದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗಿಬಿಡುತ್ತದೆ. ಉತ್ತರ ಕರ್ನಾಟಕ ನೆರೆ ಪರಿಹಾರ ಕೊಡಬೇಕು ಎಂದು ಬಿಎಸ್‍ವೈ ಮುನ್ನುಗ್ಗುತ್ತಿದ್ದಾರೆ. ಆದರೆ ಈಗ ಅಂಥವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ತಮ್ಮ ಪಕ್ಷದ ವಿರುದ್ಧವೇ ಬಿಜೆಪಿ ಕಾರ್ಯಕರ್ತ ಕಿಡಿಕಾರಿದ್ದರು.
ವಿಧಾನಸೌಧ, ವಿಧಾನಸಭೆಯಲ್ಲಿ ಯಾರೂ ಕೂಡ ಯಡಿಯೂರಪ್ಪ ಅವರನ್ನ ಬೈಯ್ಯುತ್ತಿಲ್ಲ. ಆದರೆ ನಮ್ಮ ಪಕ್ಷದಲ್ಲಿ ಸೇರಿಕೊಂಡಿರುವ ಕೆಲವು ಹುಳಗಳು ಸಿಎಂನಾ ಮೂಲೆಗುಂಪು ಮಾಡಲು ಪ್ಲಾನ್ ಹಾಕಿದ್ದಾರೆ ಎಂದರು. ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕೂಡ ಎಚ್ಚರಿಸಿದ್ದಾರೆ. ನೀವು ಹೀಗೆ ಕಚೇರಿಯಲ್ಲಿ ತಾರತಮ್ಯ ಮಾಡುತ್ತೀರಿ, ಲಿಂಗಾಯಿತರು ಎಂದು ಬೇಧ ಮಾಡಿದರೆ ನಿಜವಾಗಿಯೂ ಮುಂದಿನ ಚುನಾವಣೆಯಲ್ಲಿ 40% ರಷ್ಟು ಕೂಡ ಮತ ಬೀಳಲ್ಲ. ಬಿಎಸ್‍ವೈ ಪಕ್ಷ ಕಟ್ಟಿದ್ದಾಗ ಬಿಜೆಪಿ ಸ್ಥಿತಿ ಹೇಗಿತ್ತು ಈಗ ಹೇಗಿದೆ ಎನ್ನುವುದನ್ನು ಮರೆಯಬೇಡಿ. ನೀವು ಹೀಗೆ ತಾರತಮ್ಯ ಮಾಡುತ್ತಿದ್ದರೆ ಬಜೆಪಿ ವಿರೋಧ ಪಕ್ಷದಲ್ಲಿ ಕೂರುವಷ್ಟು ಸೀಟು ಗೆಲ್ಲಲ್ಲ ಎಂದಿದ್ದರು.
ಹಾಗೆಯೇ ಅಮಿತ್ ಶಾ ಅವರ ಬಗ್ಗೆ ಮಾತನಾಡಿ, ನೀವು ನೆರೆ ವೀಕ್ಷಣೆಗೆ ಬಂದು ಕರ್ನಾಟಕದ ಪರಿಸ್ಥಿತಿ ಬಗ್ಗೆ ತಿಳಿದಿದ್ದೀರಾ? ಆದರೂ ಪರಿಹಾರ ಬಿಡುಗಡೆ ಮಾಡಲು ಏಕೆ ತಡಮಾಡಿದ್ದೀರಿ? ಬೇರೆ ರಾಜ್ಯಗಳಿಗೆ ಎಂದು ರೀತಿ, ಕರ್ನಾಟಕ್ಕೆ ಒಂದು ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಈವರೆಗೂ ಬಿಎಸ್‍ವೈ ಜಾತಿ ರಾಜಕೀಯ ಮಾಡಿಲ್ಲ, ಮುಂದೆಯೂ ಮಾಡಲ್ಲ. ಇದನ್ನು ನಳಿನ್ ಕುಮಾರ್ ಕಟೀಲ್ ತಿಳಿದುಕೊಳ್ಳಬೇಕು. ಯಡಿಯೂರಪ್ಪ ಇದ್ದರೆ ಬಿಜೆಪಿ, ಈಗ ಅವರು ಬೇಡ ಎಂದು ಬೇರೆಯವರು ತಿಳಿದುಕೊಂಡಿದ್ದರೆ ಅದು ಅವರ ಮೂರ್ಖತನ. ಮೋದಿ ಅವರೊಬ್ಬರನ್ನೇ ನೋಡಿ ಬಿಜೆಪಿಗೆ ಜನ ಮತ ಹಾಕಿಲ್ಲ. ಕನಾಟಕದಲ್ಲಿ ಯಡಿಯೂರಪ್ಪ ಅವರನ್ನು ನೋಡಿ ಮತ ಹಾಕಿದ್ದಾರೆ. ಮೋದಿ ಅವರಿಗೆ ಹಳ್ಳಿಗಳ ಬಗ್ಗೆ ಏನು ಗೊತ್ತಿದೆ ಎಂದು ಹರಿಹಾಯ್ದಿದ್ದರು.