– ರವೀಶ್ ಎಚ್.ಎಸ್.
ಒಡೆಯದಿರು ತಳಹದಿಯ ಸರಿಪಡಿಪೆನದನೆಂದು
ಸಡಲಿಸುವ ನೀಂ ಮರಳಿ ಕಟ್ಟಲರಿತನೇಂ..?
ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವದು ಸರಿಯೇ?
ದುಡುಕದಿರು ತಿದ್ದಿಕೆಗೆ- ಮಂಕುತಿಮ್ಮ
ಐದಾರು ವರ್ಷಗಳ ಹಿಂದೆ ಸಂಘದ ಹಿರಿಯರೊಬ್ಬರು ಮಂಕುತಿಮ್ಮನ ಕಗ್ಗವನ್ನ ನೆನಪಿಸಿಕೊಂಡಿದ್ದರಂತೆ. ರಾಜ್ಯದ ಪ್ರಭಾವಿ ಸಂಘದ ಮುಖಂಡರು ದೆಹಲಿಯ ಅಂಗಳದಲ್ಲಿ ಬಿಜೆಪಿ ನಾಯಕರಿಗೆ ಕಗ್ಗವನ್ನ ಹೇಳಿದ್ದಕ್ಕೆ ಕಾರಣವೂ ಇತ್ತು. ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಅಂತಹ ಘಟಾನುಘಟಿಗಳನ್ನ ಬದಿಗೆ ಸರಿಸುವ ಯತ್ನ ನಡೆಯುತ್ತಿದ್ದಾಗ ಸಂಘದ ಹಿರಿಯರೊಬ್ಬರು ಹೀಗೆ ಹೇಳಿದ್ದರಂತೆ. ಇರುವುದನ್ನ ಸರಿಪಡಿಸುವ ಭರಾಟೆಯಲ್ಲಿ ಅಡಿಪಾಯವನ್ನೇ ಅಲುಗಾಡಿಸಬೇಡಿ. ನಿಮಗೆ ಮತ್ತೆ ಕಟ್ಟಲು ಗೊತ್ತಿದೆಯಾ..? ಒಂದು ಗಿಡವನ್ನ ಸರಿಯಾಗಿ ಬೆಳೆಸಲು ಹೋಗಿ ಬೇರುಗಳನ್ನೇ ಕೀಳುವುದು ಸರಿಯೇ..? ಇರುವುದನ್ನ ತಿದ್ದಲು ಆತುರಬೇಡ ಎಂದು ಡಿವಿಜಿ ಕಗ್ಗದ ರಸಧಾರೆಯ ಮೂಲಕ ಹೇಳಿ ಕಿವಿಮಾತು ಹೇಳಿದ್ದರಂತೆ. ಅಂದಿನ ಈ ಕಿವಿಮಾತು ಈಗ ರಾಜ್ಯ ಬಿಜೆಪಿ ರಾಜಕಾರಣಕ್ಕೂ ಪ್ರಸ್ತುತ ಎನಿಸಿದೆಯೇ ಎಂಬ ಪ್ರಶ್ನೆ ಎದ್ದಿದೆ. ಆ ಪ್ರಶ್ನೆಗೆ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಸುತ್ತಲಿನ ವಯಸ್ಸಿನ ಒಳ ರಾಜಕಾರಣ.
Advertisement
Advertisement
ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಭಾರತದ ರಾಜಕಾರಣವನ್ನ ಒಮ್ಮೆ ತಿರುಗಿ ನೋಡಿದಾಗ ರಾಜಕಾರಣದೊಳಗಿನ ವಯಸ್ಸಿಗೆ ಮಿತಿ ಇಲ್ಲ ಎನ್ನಬಹುದು. ಸ್ವಾತಂತ್ರ್ಯ ನಂತರದಿಂದ ಇಲ್ಲಿ ತನಕ ಬಹುತೇಕ ರಾಜಕಾರಣಿಗಳು ಮುಖ್ಯಮಂತ್ರಿ ಸ್ಥಾನ, ಪ್ರಧಾನ ಮಂತ್ರಿ ಸ್ಥಾನಗಳ ಗದ್ದುಗೆಯನ್ನ ಏರುತ್ತ ಇದ್ದಿದ್ದೇ 60 ತುಂಬಿದ ಬಳಿಕ. ಮಾಗಿದ ಬಳಿಕವೇ ಅಧಿಕಾರ ಅನ್ನೋ ಅಲಿಖಿತ ನಿಯಮ ಇತ್ತೇನೋ ಎನ್ನುವಂತಿತ್ತು ನಮ್ಮ ರಾಷ್ಟ್ರದ ರಾಜಕಾರಣ. ನರೇಂದ್ರ ಮೋದಿಗೂ ಮುನ್ನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವಧಿ ಮುಗಿಸಿದಾಗ ವಯಸ್ಸು 81 ಅನ್ನೋದನ್ನ ಯಾರೂ ಮರೆತಿಲ್ಲ. ಮೃದು ಮಾತು, ಮೆಲ್ಲನೆ ನಡಿಗೆಯ ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ವಯಸ್ಸಿನ ದೊಡ್ಡ ಚಕಾರ ಇರಲಿಲ್ಲ. ಅಷ್ಟೇ ಏಕೆ ವೃದ್ಧಾಪ್ಯದ ಜೀವಯಾನದಲ್ಲೂ ನಮ್ಮ ರಾಷ್ಟ್ರದ ಹಲವು ರಾಜ್ಯಗಳ ಮುಖ್ಯಮಂತ್ರಿಗಳಾಗಿದ್ದವರ ಪಟ್ಟಿಗೆ ಕೊರತೆ ಇಲ್ಲ. 80 ವರ್ಷ ತುಂಬಿದ 7 ಕ್ಕೂ ಹೆಚ್ಚು ನಾಯಕರು ಮುಖ್ಯಮಂತ್ರಿಗಳ ಪಟ್ಟಕೇರಿದ್ದ ಇತಿಹಾಸವೂ ಇದೆ. ಆದರಲ್ಲೂ ದಕ್ಷಿಣ ಭಾರತದ ರಾಜಕಾರಣದಲ್ಲಿ ತಮಿಳುನಾಡು, ಕೇರಳ ರಾಜ್ಯಗಳಲ್ಲಿ 80ರ ನಂತರದ ವಯಸ್ಸಲ್ಲೂ ಮುಖ್ಯಮಂತ್ರಿಗಳಾಗಿದ್ದ ಉದಾಹರಣೆಗಳಿವೆ.
Advertisement
Advertisement
ಆದರೆ ಕರ್ನಾಟಕದ ಮಟ್ಟಿಗೆ 75 ವರ್ಷ ತುಂಬಿದ ನಂತರ ಮುಖ್ಯಮಂತ್ರಿ ಆದವರು ಯಡಿಯೂರಪ್ಪ ಒಬ್ಬರೇ. ಆದ್ರೆ 70 ವರ್ಷ ತುಂಬಿದ ನಂತರ ಇಬ್ಬರು ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ರು. ಎಸ್.ಎಂ.ಕೃಷ್ಣ ಅವರ ವಯಸ್ಸು 72 ಇದ್ದಾಗ, ಧರಂಸಿಂಗ್ ವಯಸ್ಸು 70 ಇದ್ದಾಗ ಮುಖ್ಯಮಂತ್ರಿ ಅವಧಿ ಕೊನೆಗೊಂಡಿತ್ತು. ನಿಜಲಿಂಗಪ್ಪ, ವಿರೇಂದ್ರ ಪಾಟೀಲ್ 66 ವರ್ಷ ಇದ್ದಾಗ, ದೇವರಾಜ ಅರಸ್, ಎಸ್.ಆರ್.ಬೊಮ್ಮಾಯಿ 65 ವರ್ಷ ಇದ್ದಾಗ, ಜೆ.ಎಚ್.ಪಟೇಲ್ 69 ವರ್ಷ ಇದ್ದಾಗ, ರಾಮಕೃಷ್ಣ ಹೆಗಡೆ 62 ವರ್ಷ ಇದ್ದಾಗ, ಹೆಚ್.ಡಿ.ದೇವೇಗೌಡ 61 ವರ್ಷ ಇದ್ದಾಗ ಮುಖ್ಯಮಂತ್ರಿ ಅವಧಿ ಕೊನೆಗೊಂಡಿತ್ತು.
ಇನ್ನು ತಮಿಳುನಾಡಿನ ರಾಜಕಾರಣದ ರೀತಿ ಬೇರೆಲ್ಲೂ ಇತಿಹಾಸ ಕಾಣಲು ಆಗದು. ನಡೆದಾಡಲು ಆಗದಿದ್ದ ಸ್ಥಿತಿಯಲ್ಲೂ ಡಿಎಂಕೆ ನಾಯಕ ಎಂ.ಕರುಣಾನಿಧಿ ಗಾಲಿ ಕುರ್ಚಿಯಲ್ಲಿ ಕುಳಿತು ಮುಖ್ಯಮಂತ್ರಿಯಾಗಿ ಆಡಳಿತವನ್ನು ನಡೆಸಿದ ಇತಿಹಾಸವೂ ನಮ್ಮ ಕಣ್ಣ ಮುಂದಿದೆ. 5 ಬಾರಿ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿ ತಮ್ಮ 87ನೇ ವಯಸ್ಸಿನಲ್ಲಿ ಕಡೆಯ ಅಧಿಕಾರಾವಧಿ ಮುಗಿಸಿದ್ದು. ಇನ್ನು ನಮ್ಮ ನೆರೆಯ ರಾಜ್ಯ ಕೇರಳದ ಸಿಪಿಐಎಂನ ನಾಯಕ ವಿ.ಎಸ್.ಅಚ್ಯುತಾನಂದನ್ ವಯಸ್ಸು 88 ವರ್ಷ ಇದ್ದಾಗಲೇ ಮುಖ್ಯಮಂತ್ರಿ ಅವಧಿ ಕೊನೆಗೊಂಡಿದ್ದು. ಕೇರಳದ ಮತ್ತೋರ್ವ ಸಿಪಿಐಎಂ ನಾಯಕ ವಿ.ಕೆ.ನಾಯನರ್ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದು. ನಾಯನರ್ 82 ವರ್ಷ ಇದ್ದಾಗ ಮುಖ್ಯಮಂತ್ರಿ ಅವಧಿ ಕೊನೆಗೊಂಡಿತ್ತು.
ಇದೆಲ್ಲದರ ಜತೆಗೆ ಉತ್ತರ ಭಾರತದತ್ತ ತಿರುಗಿ ನೋಡಿದಾಗ ಘಟಾನುಘಟಿ ನಾಯಕರು ಸಿಗುತ್ತಾರೆ. ಪಂಜಾಬ್‍ನ ಶಿರೋಮಣಿ ಅಕಾಲಿ ದಳದ ನಾಯಕ ಪ್ರಕಾಶ್ ಸಿಂಗ್ ಬಾದಲ್ ವಯಸ್ಸು 90 ತುಂಬಿದಾಗಲೇ ಮುಖ್ಯಮಂತ್ರಿ ಅವಧಿ ಕೊನೆಗೊಂಡಿದ್ದು. ಪಶ್ಚಿಮ ಬಂಗಾಳದ ಸಿಪಿಎಂ ನಾಯಕ, ಧೀರ್ಘಾವಧಿ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಕೂಡ ತಮ್ಮ 86ನೇ ವಯಸ್ಸಿನಲ್ಲೇ ಕಡೆಯ ಅವಧಿ ಮುಗಿಸಿದ್ದು ಎನ್ನುವುದು ಗಮನಾರ್ಹ. ಹಿಮಾಚಲ ಪ್ರದೇಶದ ವೀರಭದ್ರ ಸಿಂಗ್ ತಮ್ಮ 83ನೇ ವಯಸ್ಸಿನಲ್ಲಿ, ಒಡಿಸ್ಸಾದ ಬೀಜು ಜನತಾದಳದ ನಾಯಕ ಬೀಜು ಪಟ್ನಾಯಕ್ ತಮ್ಮ 80ನೇ ವಯಸ್ಸಿನಲ್ಲಿ ಮುಖ್ಯಮಂತ್ರಿಯ ಅವಧಿಯನ್ನ ಕೊನೆಗೊಳಿಸಿದ್ದರು.
ಹೀಗೆ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ವಯಸ್ಸು ಮತ್ತು ರಾಜಕಾರಣದ ಇತಿಹಾಸ ಇದೆ. ಇದೆಲ್ಲದರ ನಡುವೆ ಪ್ರಸ್ತುತ ಸನ್ನಿವೇಶದಲ್ಲೂ 70 ಮುಗಿದು ಮಾಗಿದ ನಾಯಕರು ಮುಖ್ಯಮಂತ್ರಿಗಳಾಗಿರುವುದನ್ನ ಗಮನಿಸಬೇಕಿದೆ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ 7 ರಾಜ್ಯಗಳ ಮುಖ್ಯಮಂತ್ರಿಗಳ ವಯಸ್ಸು 70 ದಾಟಿದೆ. ಆದ್ರೆ ಆ 7 ಮಂದಿ ಮುಖ್ಯಮಂತ್ರಿಗಳಲ್ಲಿ ಯಡಿಯೂರಪ್ಪ ಹಿರಿಯರು ಅನ್ನೋದು ವಿಶೇಷ. 77 ವರ್ಷ ಮುಗಿಸಿ 78ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ ಯಡಿಯೂರಪ್ಪ. ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ 74, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ 77, ಮಿಝೋರಾಂ ಮುಖ್ಯಮಂತ್ರಿ ಝೋರಾಮ್‍ಥಂಗ 75, ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 73, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ 73, ಪಾಂಡಿಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ 72 ವಯಸ್ಸು ಆಗಿದೆ. ಹೀಗಿರುವಾಗ ಯಡಿಯೂರಪ್ಪಗೆ ಮಾತ್ರ ಏಕೆ ವಯಸ್ಸಿನ ಅಡ್ಡಿ ಅನ್ನೋದು ಯಡಿಯೂರಪ್ಪ ಆಪ್ತರ ಪ್ರಶ್ನೆ.
ಆದರೆ ದೇಶದ 11 ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳಿದ್ದು, ಆದರಲ್ಲಿ 75 ವರ್ಷ ತುಂಬಿದವರು ಯಡಿಯೂರಪ್ಪ ಒಬ್ಬರೇ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ 70 ವರ್ಷದ ಒಳಗಿನವರಾಗಿದ್ದಾರೆ. ಹಿಮಾಚಲ್ ಪ್ರದೇಶ, ಉತ್ತರಾಖಂಡ್, ಮಣಿಪುರ, ಅಸ್ಸಾಂನ ನಾಲ್ವರು ಮುಖ್ಯಮಂತ್ರಿಗಳ ವಯಸ್ಸು 60 ವರ್ಷದೊಳಗಿದೆ. ಉತ್ತರ ಪ್ರದೇಶ ಗೋವಾ, ತ್ರಿಪುರ, ಅರುಣಾಚಲ ಪ್ರದೇಶದ ನಾಲ್ವರು ಮುಖ್ಯಮಂತ್ರಿಗಳ ವಯಸ್ಸು 50 ವರ್ಷದೊಳಗಿದೆ. ಹಾಗಾಗಿ ಪ್ರಸ್ತುತದಲ್ಲಿ 60 ವರ್ಷದೊಳಗಿನ ಹೆಚ್ಚಿನವರು ಬಿಜೆಪಿ ಮುಖ್ಯಮಂತ್ರಿಗಳಿರೋದೇ ವಯಸ್ಸಿನ ಒಳ ರಾಜಕಾರಣ ಗಟ್ಟಿಯಾಗಲು ಕಾರಣ ಅನ್ನುವುದು ಬಿಜೆಪಿಯ ಇನ್ನೊಂದು ಗುಂಪಿನ ವಾದ. ವಿಶೇಷ ಪ್ರಕರಣ ಎನ್ನುವ ಕಾರಣಕ್ಕಾಗಿ ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರಿಸಿದ್ದು. ಆ ಕುರ್ಚಿಯ ಮೇಲೆ ಕೂರಿಸುವಾಗ ಇಷ್ಟು ವರ್ಷ ಕೂತಿರುತ್ತಾರೆ ಅನ್ನೋ ಭರವಸೆಯನ್ನೂ ಕೊಟ್ಟಿಲ್ಲ. ಇಷ್ಟು ವರ್ಷ ಕೂರಿಸಲೇಬೇಕು ಎಂಬ ನಿಯಮವೂ ಇಲ್ಲ ಎಂಬುದು ಯಡಿಯೂರಪ್ಪ ವಿರೋಧಿ ಬಣದ ತರ್ಕವಾಗಿದೆ.
ಹಾಗಾದರೆ ಬೇರೆ ರಾಜ್ಯಗಳಲ್ಲಿ ಬಿಜೆಪಿಗೆ ಇರುವ ಪರಿಸ್ಥಿತಿ ಕರ್ನಾಟಕದಲ್ಲಿ ಇದೆಯಾ..? ಎಂಬ ಪ್ರಶ್ನೆಯೂ ದೆಹಲಿಯ ಅಂಗಳದಲ್ಲಿ ಎದ್ದಿದೆ. ಕರ್ನಾಟಕದಲ್ಲಿ ವಿಭಿನ್ನ ಪರಿಸ್ಥಿತಿಯ ಕಾರಣಕ್ಕಾಗಿಯೇ 75 ದಾಟಿದ್ದರೂ ಯಡಿಯೂರಪ್ಪ ನಾಯಕತ್ವದಲ್ಲೇ ಚುನಾವಣೆಗೆ ಹೋಗಿದ್ದು ಅನ್ನೋ ಸತ್ಯವನ್ನ ಯಾರೂ ಮರೆಮಾಚಲು ಆಗದು. ಬಹುದೊಡ್ಡ ಸಮುದಾಯ ಒಂದು ಪಕ್ಷದ ಬೆನ್ನಿಗೆ ನಿಂತಿತ್ತು. ಅನ್ನುವ ವಾಸ್ತವದ ಅರಿವು ಹೈಕಮಾಂಡ್‍ಗೆ ಗೊತ್ತಿದೆ. ಆದರೂ ಯಡಿಯೂರಪ್ಪರನ್ನ ಬದಿಗೆ ಸರಿಸುವ ಪ್ರಯತ್ನಗಳು ನಡೆಯುತ್ತಿರುವುದು ಬಿಜೆಪಿಯ ಗೊಂದಲಕ್ಕೆ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಯಡಿಯೂರಪ್ಪ ನಂತರದ ನಾಯಕ ಯಾರೂ ಎಂಬ ಪ್ರಶ್ನೆಗೂ ಯಾರ ಬಳಿಯೂ ಉತ್ತರವಿಲ್ಲ. ಯಡಿಯೂರಪ್ಪ ಬದಿಗೆ ಸರಿದರೆ ಇವರೇ ನಾಯಕ ಎನ್ನುವ ಮುಖವನ್ನ ಹೈಕಮಾಂಡ್ ಮುಂದೆ ನಿಲ್ಲಿಸಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಹೈಕಮಾಂಡ್ ಕೂಡ ಯಡಿಯೂರಪ್ಪ ನಂತರದ ನಾಯಕ, ನಾವಿಕ ಇವನೇ ಎಂದು ಗುರುತಿಸುವ ಸ್ಥಿತಿಯಲ್ಲೂ ಇಲ್ಲ. ಹೀಗಿರುವಾಗ ಆಗಾಗ್ಗೆ ವಯಸ್ಸಿನ ಅಡ್ಡಿಯ ಅನಾಮಧೇಯ ಪತ್ರಗಳು ಹರಿದಾಡಿ ಬಿರುಗಾಳಿ ಎಬ್ಬಿಸಲು ಪ್ರಯತ್ನಿಸುತ್ತಿವೆ.
ಈ ನಡುವೆ ಯಡಿಯೂರಪ್ಪಗೆ ವಯಸ್ಸಿನ ರಾಜಕಾರಣದ ಏಟು ಬಿದ್ದಷ್ಟು ಗಟ್ಟಿಯಾಗಿ ನಡೆಯಲು ಶುರು ಮಾಡಿದ್ದಾರೆ. ಇತ್ತಿಚೀಗೆ ಅನಾಮಧೇಯ ಪತ್ರವೊಂದು ಹರಿದಾಡಿದ್ದಾಗಲೇ ಯಡಿಯೂರಪ್ಪ ನಗಲು ಶುರು ಮಾಡಿದ್ದರಂತೆ. ಯಾರು ಬರೆದಿರಬಹುದು ಅಂತಾ ಅವರ ಆಪ್ತರು ಒಂದೊಂದು ಹೆಸರನ್ನು ಬಿಡುತ್ತಿದ್ದಾಗ ಯಡಿಯೂರಪ್ಪ ನೋಡೋಣ ಬಿಡಿ ಅಂದರಂತೆ. ಈ ಸನ್ನಿವೇಶಗಳನ್ನ ಗಮನಿಸಿದಾಗ ಸದ್ಯಕ್ಕೆ ಬಿಜೆಪಿಯಲ್ಲಿ ನಾನೇ ರಾಜಾಹುಲಿ ಎಂಬುದು ಯಡಿಯೂರಪ್ಪಗೆ ಗೊತ್ತಿದೆ. ಹಾಗಾಗಿಯೇ ಯಾವ ಏಟಿಗೆ ಕುಗ್ಗದೇ ಎಸೆಯುವ ಪ್ರತಿ ಕಲ್ಲುಗಳನ್ನ ಮೆಟ್ಟಿಲು ಮಾಡಿಕೊಳ್ಳುತ್ತಿದ್ದಾರೆ. ಹಿಂದೆಯಿಂದ ಯಡಿಯೂರಪ್ಪ ಬಗ್ಗೆ ಮಾತನಾಡುವ ಮುಖಂಡರು ಕೂಡ ಎದುರಿಗೆ ಬಂದಾಗ ರಾಜಾಹುಲಿ ಬಂದರು ದಾರಿ ಬಿಡಿ ಅನ್ನುವ ಸ್ಥಿತಿ ಬಿಜೆಪಿಯಲ್ಲಿದೆ. ಹೀಗಿರುವಾಗ ಬಿಜೆಪಿ ಪಾಲಿಗೆ ವಯಸ್ಸು ಮತ್ತು ರಾಜಕಾರಣದ ವಿಷಯವನ್ನ ಆಗಾಗ್ಗೆ ಪ್ರಯೋಗಕ್ಕೆ ಬಿಡುವ ಯತ್ನ ನಡೆಯುತ್ತಿದ್ದರೂ ಅದು ಸಾದ್ಯವಾಗುತ್ತಿಲ್ಲ. ಸಂಘದ ಹಿರಿಯರು ಹೇಳಿದಂತೆ ತಪ್ಪು ಮಾಡುವ ರೆಂಬೆ ಕೊಂಬೆಗಳನ್ನ ಕಡಿಯಬೇಕೇ ವಿನಃ ಮರದ ಬುಡವನ್ನೇ ಏಕಾಏಕಿ ಕಿತ್ತು ಹಾಕಿದರೆ ಅದರಿಂದಾಗುವ ಪರಿಣಾಮಗಳ ಜತೆಯೇ ಹೆಚ್ಚು ಗುದ್ದಾಡಬೇಕಾಗುತ್ತೆ. ಈ ಸತ್ಯವನ್ನ ಬಿಜೆಪಿಗೆ ಒದಗಿಬಂದಿರುವ ಈ ಸ್ಥಿತಿಯಲ್ಲಿ ಬಿಜೆಪಿ ನಾಯಕರು ಅರಿಯದೇ ಮುನ್ನಡೆಯರು ಅನ್ನಿಸುತ್ತೆ.
ಹೂಚೆಂಡು: ವಿಧಾನಸಭೆ ಜಂಟಿ ಅಧಿವೇಶನದ ನಡುವೆಯೇ ಅನಾಮಧೇಯ ಪತ್ರ ಹರಿದಾಡುತ್ತಿತ್ತು. ಯಡಿಯೂರಪ್ಪ ನಿಮಗೆ ವಯಸ್ಸಾಯ್ತು ಅಂತಾ ಪತ್ರದಲ್ಲಿ ಹಾರಾಡಿದ್ದರೆ, ವಿಧಾನಸಭೆ ಅಧಿವೇಶನದ ಕಲಾಪದಲ್ಲಿ ನಮ್ಮದು ರಾಜಾ ಹುಲಿ ಸರ್ಕಾರ, ಹೇಡಿ ಸರ್ಕಾರ ಅಲ್ಲ ಅಂತಾ ಶಾಸಕ ಸುನೀಲ್ ಕುಮಾರ್ ಹೇಳಿದಾಗ ಗಟ್ಟಿಯಾಗಿ ಮೇಜು ಕುಟ್ಟಿದ್ರು ಬಿಜೆಪಿ ಶಾಸಕರು. ಹಾಗಾದರೆ ಪತ್ರ ಬರೆದವರು ಯಾರು ಸಿವಾ ಅಂತಾ ವಿರೋಧ ಪಕ್ಷದವರು ತಲೆಗೆ ಕೈ ಹಾಕಿದ್ರು ನೋಡಿ.
[ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]