ಹಾವೇರಿ: ಮೂರು ಕೃಷಿ ಕಾನೂನುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ವಾಪಸ್ ಪಡೆದರೆಂಬ ವಿಚಾರ ಗೊತ್ತಿಲ್ಲ. ಆಗ ನಾನು ಹೊಲದಲ್ಲಿದ್ದೆ, ತಿಳಿದುಕೊಂಡು ಹೇಳುತ್ತೇನೆ ಎಂದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಹಳ್ಳೂರು, ಪುರದಕೇರಿ ಗ್ರಾಮಗಳಲ್ಲಿ ಬೆಳೆ ಹಾನಿ ಪರಿಶೀಲನೆ ನಂತರ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ವಿಚಾರವಾಗಿ ನನಗೆ ಇನ್ನೂ ಮಾಹಿತಿ ಬಂದಿಲ್ಲ. ಮಾಹಿತಿ ಬಂದ ನಂತರ ಹೇಳುತ್ತೇನೆ. ಕಾಯ್ದೆಗಳನ್ನು ಯಾವ ಕಾರಣಕ್ಕೆ ತೆಗೆದಿದ್ದಾರೆ, ಏನು ಮಾಡಿದ್ದಾರೆ. ಪ್ರಧಾನಿಯವರು ಏನು ಹೇಳಿದ್ದಾರೆ ಗೊತ್ತಿಲ್ಲ. ಅದರ ಬಗ್ಗೆ ತಿಳಿದುಕೊಂಡು, ಪರಿಶೀಲನೆ ಮಾಡಿ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ.
Advertisement
ಅಕಾಲಿಕ ಮಳೆಯಿಂದ ಭತ್ತ, ಜೋಳ, ಬಾಳೆ ನೆಲಕಚ್ಚಿದೆ. ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಂದಾಯ ಇಲಾಖೆಯವರ ಜೊತೆ ಸೇರಿ ಸಮೀಕ್ಷೆ ಮಾಡಿ ವರದಿ ಕೊಡುವಂತೆ ತಿಳಿಸಿದ್ದೇನೆ. ಚಿಕ್ಕಕಬ್ಬಾರ, ಹಿರೇಕಬ್ಬಾರ, ಚಟ್ನಳ್ಳಿ, ಪುರುದಕೇರಿ ಭಾಗದಲ್ಲಿ ನಾನೂ ಕೂಡ ವೀಕ್ಷಣೆ ಮಾಡಿದ್ದೇನೆ. ಕೂಡಲೆ ನಷ್ಟದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಿ ಕೊಟ್ಟ ನಂತರ ಸರ್ಕಾರದಿಂದ ರೈತರಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
Advertisement
ಜುಲೈನಿಂದ ಇಲ್ಲಿಯವರೆಗೆ 10 ಲಕ್ಷ 73 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅದಕ್ಕೆ ಪರಿಹಾರ ಒದಗಿಸಲು ಕ್ರಮ ಕೈಗೊಂಡಿದ್ದೇವೆ. ಎನ್‍ಡಿಆರ್‌ಎಫ್ ಮತ್ತು ಎಸ್‍ಡಿಆರ್‌ಎಫ್ ನಿಯಮದಂತೆ ಪರಿಹಾರ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ. ಸಿಎಂ ಅವರಿಗೂ ಪರಿಹಾರಕ್ಕಾಗಿ ಒತ್ತಾಯ ಮಾಡುತ್ತೇನೆ. ಕೂಡಲೆ ಹಣ ಬಿಡುಗಡೆ ಮಾಡಿ ರೈತರಿಗೆ ಸಂದಾಯ ಆಗಬೇಕು. ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಹೆಚ್ಚಿನ ಪ್ರಮಾಣದ ಹಾನಿ ಆಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಹಾನಿ ಆಗಿದೆ. ಅದರ ಬಗ್ಗೆ ಪರಿಶೀಲನೆ ಮಾಡಿ ವರದಿ ಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.