ಬೆಂಗಳೂರು: ಶಾಸಕರ ಅನರ್ಹತೆಯ ಪ್ರಕರಣ ಮುಂದಿನ ತಿಂಗಳು 22ಕ್ಕೆ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಬರಲಿದೆ. ಈ ಸಂಬಂಧ ಮಾತುಕತೆ ನಡೆಸಲು ರಮೇಶ್ ಜಾರಕಿಹೊಳಿ ಅವರ ನಿವಾಸಕ್ಕೆ ಅನರ್ಹ ಶಾಸಕರೆಲ್ಲರೂ ಆಗಮಿಸಿದ್ದೇವು ಎಂದು ಅನರ್ಹ ಶಾಸಕರ ಬಿಸಿ ಪಾಟೀಲ್ ಹೇಳಿದ್ದಾರೆ.
ಅನರ್ಹ ಶಾಸಕರ ಸಭೆಯ ಬಳಿಕ ಮಾತನಾಡಿದ ಬಿಸಿ ಪಾಟೀಲ್ ಅವರು, ಚುನಾವಣೆ ಎದುರಾದರೆ ಕೆಲ ಸಮಸ್ಯೆಗಳು ಉದ್ಭವಿಸುತ್ತದೆ. ಈ ಬಗ್ಗೆ ಚರ್ಚೆ ನಡೆಸಲು ಆಗಮಿಸಿದ್ದೇವು ಎಂದರು. ಇದೇ ವೇಳೆ ಅನರ್ಹ ಶಾಸಕರ ಬಗೆಗಿನ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ನಾನು ಈಗ ಬಿಜೆಪಿ ಬಗ್ಗೆ ಮಾತನಾಡಲು ಇಷ್ಟ ಪಡುವುದಿಲ್ಲ. ಆದರೆ ನಮ್ಮ ವಿರುದ್ಧವಾಗಿ ಯಾರು ಯಾರು ಕೊಟ್ಟದಾಗಿ ಮಾತನಾಡುತ್ತಾರೋ ಅವರ ಬಾಯಿಗೆ ಸಕ್ಕರೆ ಹಾಕೋಣ ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದರು.
ಇದೇ ವೇಳೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಡಿಸಿಎಂ ಅಶ್ವಥ್ ನಾರಾಯಣ ಅವರು ಭೇಟಿ ನೀಡಿದ್ದಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಎಸ್ ಯಡಿಯೂರಪ್ಪ ಅವರು ಪಕ್ಷಕ್ಕೆ ಆಹ್ವಾನ ನೀಡಿದ್ದರು ಕೂಡ ಈ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಅನರ್ಹ ಶಾಸಕರಾಗಿರುವ ನಾವು ಅರ್ಹರಾಗುವ ಪ್ರಯತ್ನದಲ್ಲಿ ಇದ್ದೇವೆ. ಆ ಕುರಿತು ಚರ್ಚೆ ನಡೆಸಿ ವಕೀಲರಿಗೆ ಕೆಲ ಮಾಹಿತಿಯನ್ನು ನೀಡಿದ್ದೇವೆ. ಆದರೆ ಡಿಸಿಎಂ ಅಶ್ವಥ್ ನಾರಾಯಣ ಅವರು ಭೇಟಿ ನೀಡಿರುವ ಬಗ್ಗೆ ನಮಗೆ ಗೊತ್ತಿಲ್ಲ. ಆದರೆ ನಾವು ಬಿಜೆಪಿ ಸೇರುವ ಬಗ್ಗೆ ಯಾವುದೇ ಚರ್ಚೆ, ತೀರ್ಮಾನ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದರು.