– ಮೈತ್ರಿ ಸರ್ಕಾರ, ಎಚ್‍ಡಿಕೆ ಕುಟುಂಬ ರಾಜಕಾರಣ ವಿರುದ್ಧ ವಾಗ್ದಾಳಿ
ಬೆಂಗಳೂರು: ಅನರ್ಹಗೊಂಡಿದ್ದ ಅತೃಪ್ತ ಶಾಸಕ ಬಿ.ಸಿ.ಪಾಟೀಲ್ ಅವರು ಬರೋಬ್ಬರಿ ಒಂದು ತಿಂಗಳ ಬಳಿಕ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಇಂದು ಸಂಜೆ 05.45ರ ವೇಳೆಗೆ ಇಂಡಿಗೋ ವಿಮಾನದಲ್ಲಿ ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷ 2 ತಿಂಗಳಿನಿಂದ ರಾಜ್ಯದಲ್ಲಿ ರಾಕ್ಷಸ ಸರ್ಕಾರವಿತ್ತು. ಕಾಂಗ್ರೆಸ್ಸಿನ ಇಬ್ಬರು, ಮೂವರು ನಾಯಕರಿಗೆ ಬಿಟ್ಟರೆ ಸಂಪೂರ್ಣ ಆಡಳಿತ ಒಂದೇ ಕುಟುಂಬದ ಹಿಡಿತದಲ್ಲಿತ್ತು. ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಸರ್ಕಾರ ಆಡಳಿತ ನಡೆಯುತಿತ್ತು. ಹೀಗಾಗಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಹಾಗೂ ಉತ್ತರ ಕರ್ನಾಟಕ, ನಮ್ಮ ಕ್ಷೇತ್ರಗಳಿಗೆ ಆಗುತ್ತಿದ್ದ ಅನ್ಯಾಯ ತಡೆಯಲು ನಾವು ರಾಜೀನಾಮೆ ನೀಡಿದ್ದೇವೆ ಎಂದರು.
Advertisement
Advertisement
ಸ್ಪೀಕರ್ ಅನರ್ಹತೆ ತೀರ್ಮಾನದ ಕುರಿತು ಮಾತನಾಡಿದ ಅವರು, ಈ ನಿರ್ಧಾರದ ವಿರುದ್ಧ ಈಗಾಗಲೇ ಸುಪ್ರೀಂಕೋರ್ಟ್ ಮೊರೆಹೋಗಿದ್ದು ಮುಂದಿನ ವಾರ ಉತ್ತಮ ನಿರ್ಣಯ ಬರುತ್ತೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಸ್ಪಷ್ಟ ಪಡಿಸಿದ ಅವರು, ಕ್ಷೇತ್ರಕ್ಕೆ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಆಗುತ್ತಿದ್ದ ಅನ್ಯಾಯವನ್ನು ತಡೆಯಲು ರಾಜೀನಾಮೆ ನೀಡಿ ಸರ್ಕಾರ ಕೆಡುವುದರಲ್ಲಿ ಯಶಸ್ವಿಯಾಗಿದ್ದೇವೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಹಿರೇಕೆರೂರಿನಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿ ಯಾವ ಪಕ್ಷದಿಂದ ಎಂಬ ತೀರ್ಮಾನ ಮಾಡುತ್ತೇನೆ ಎಂದರು.
Advertisement
ಚುನಾವಣೆಯಲ್ಲಿ ಪುತ್ರಿ ಸ್ಪರ್ಧೆ ಮಾಡುತ್ತರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಮಗಳು ಕೂಡ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು. ನಾನು ಕೇವಲ ಹಿರೇಕೆರೂರು ಕ್ಷೇತ್ರಕ್ಕೆ ಮಾತ್ರ ಸಮೀತವಾಗಿಲ್ಲ. ಇಡೀ ರಾಜ್ಯಕ್ಕೆ ನನ್ನ ಬಗ್ಗೆ ತಿಳಿದಿದೆ. ನನ್ನ ಜೀವನದಲ್ಲಿ ಎರಡನೇ ರಾಜೀನಾಮೆ ನೀಡಿದ್ದೇನೆ. 2002 ರಲ್ಲಿ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಅಂದು ಸಹ ನಾನು ಆಸೆ ಆಕಾಂಕ್ಷೆಗಳನ್ನು ಹೊಂದಿರಲಿಲ್ಲ. ಯಾವುದೇ ಆಸೆ ಆಕಾಂಕ್ಷೆಗಳಿಗೆ ಒಳಗಾಗುವ ವ್ಯಕ್ತಿ ನಾನಲ್ಲ. ಮುಂದಿನ ಚುನಾವಣೆಯಲ್ಲಿ ನಾನು ಗೆದ್ದು ಮತ್ತೆ ವಿಧಾನಸಭೆ ಪ್ರವೇಶ ಮಾಡುವ ಅರ್ಹತೆ ಪಡೆದುಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.