ಬೆಂಗಳೂರು: ಕಾಲಮಿತಿಯಲ್ಲಿ ಸರ್ಕಾರಿ ಸೇವೆಗಳನ್ನು ನೀಡುವ ಭರವಸೆ ನೀಡುವ ಸಕಾಲ ಸೇವೆ ಯೋಜನೆಯಲ್ಲಿ ತತ್ಕಾಲ್ ಸೇವೆಯನ್ನು ತರುವ ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸಕಾಲ ಸೇವೆ ಆರಂಭವಾಗಿ ಏಪ್ರಿಲ್ 2ಕ್ಕೆ 10 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಸಕಾಲ ದಶಮಾನೋತ್ಸವ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು. ನಂತರ ನವೀಕೃತ ಸಕಾಲ ವೆಬ್ಸೈಟ್ನ್ನು ಲೋಕಾರ್ಪಣೆಗೊಳಿಸಿದರು.
Advertisement
Advertisement
ಈ ವೇಳೆ ಮಾತನಾಡಿದ ಸಚಿವ ಬಿಸಿ ನಾಗೇಶ್, ರಾಜ್ಯ ಸರ್ಕಾರದ 99 ಇಲಾಖೆಗಳ 1,115 ಸೇವೆಗಳು ಸಕಾಲ ಸೇವೆಯಲ್ಲಿ ಲಭ್ಯ ಇವೆ. ವಿವಿಧ ಇಲಾಖೆಗಳ ಒಂದೊಂದು ಸೇವೆಗೆ ಒಂದೊಂದು ಕಾಲ ಮಿತಿ ನಿಗದಿಪಡಿಸಲಾಗಿದೆ. ಸಕಾಲ ಯೋಜನೆ ಕಾರಣ ಅರ್ಜಿಗಳು ಕಾಲಮಿತಿಯಲ್ಲಿ ವಿಲೇವಾರಿ ಆಗುತ್ತಿವೆ. ಆದರೆ, ಕೆಲವು ಸಂದರ್ಭಗಳಲ್ಲಿ ಅರ್ಜಿದಾರರಿಗೆ ತುರ್ತಾಗಿ ಒಂದೆರೆಡು ದಿನಗಳಲ್ಲಿ ದಾಖಲೆಗಳು, ಪ್ರಮಾಣಪತ್ರಗಳು ಬೇಕಾಗುತ್ತವೆ. ಅಂತಹ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸೇವೆ ಒದಗಿಸಲು ತತ್ಕಾಲ್ ಸೇವೆಯನ್ನು ಜಾರಿಗೆ ತರುವ ಚಿಂತನೆ ಇದೆ. ಈ ಕುರಿತು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಹೊರಟ್ಟಿ ಬಿಜೆಪಿಗೆ ಬಂದರೆ ಸ್ವಾಗತ: ಶಿವರಾಮ್ ಹೆಬ್ಬಾರ್
Advertisement
2012ರ ಏಪ್ರಿಲ್ 2ರಿಂದ ಈ ವರ್ಷದ ಫೆಬ್ರವರಿ 28ರವರೆಗೆ 26.56 ಕೋಟಿ ಅರ್ಜಿಗಳು ಸ್ವೀಕೃತವಾಗಿದ್ದು, 26.41 ಕೋಟಿ ಅರ್ಜಿಗಳು ವಿಲೇವಾರಿಗೊಂಡಿವೆ. ಸಕಾಲ ಸೇವೆಯಡಿ ಕಾಲಮಿತಿಯಲ್ಲಿ ಸೇವೆ ಒದಗಿಸದ ಅಧಿಕಾರಿ ಅಥವಾ ಸಿಬ್ಬಂದಿಗೆ ದಂಡ ವಿಧಿಸಲು ಅವಕಾಶ ಇದೆ. ಆದರೆ, ಅದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳು ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದರು.
Advertisement
ಸರ್ಕಾರಿ ಉದ್ಯೋಗ ಪಡೆದ ಬಳಿಕ ಸೇವಕರಾಗಿ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರಿ ಸೇವೆಗಳನ್ನು ಒದಗಿಸುವುದರಲ್ಲಿ ಪಾರದರ್ಶಕತೆ, ಬದ್ಧತೆ ಮತ್ತು ಜವಾಬ್ದಾರಿ ಇರಬೇಕು.ಕಾಲಮಿತಿಯಲ್ಲಿ ಸೇವೆ ಒದಗಿಸಬೇಕು. ಇಲ್ಲದಿದ್ದರೆ ಅದಕ್ಕೆ ಕಾರಣವನ್ನು ತಿಳಿಸುವ ವ್ಯವಸ್ಥೆಯು ಜಾರಿಗೆ ತರಬೇಕು ಎನ್ನುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಅದನ್ನು ಜಾರಿಗೆ ತರುವ ಬಗ್ಗೆಯು ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.