– ನಿಮ್ಮ ಕ್ಷಮೆಯನ್ನ ಸ್ವೀಕರಿಸಲ್ಲ
– ಸ್ಪೀಕರ್ ಸ್ಥಾನದ ಗೌರವ ಗೊತ್ತಿಲ್ಲ
ನವದೆಹಲಿ: ಸದನದಲ್ಲಿ ಸೆಕ್ಸಿ ಹೇಳಿಕೆ ನೀಡಿ, ವಿವಾದಕ್ಕೆ ಗುರಿಯಾಗಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಕ್ಷಮೆ ಕೇಳಿದ್ದಾರೆ.
ಸ್ಪೀಕರ್ ಸ್ಥಾನದ ಬಗ್ಗೆ ನನಗೆ ಗೌರವವಿದೆ. ಆ ಸ್ಥಾನಕ್ಕೆ ಅಗೌರವ ತೋರುವ ಉದ್ದೇಶದಿಂದ ಹಾಗೆ ಮಾತನಾಡಿಲ್ಲ. ನನ್ನ ನಡವಳಿಕೆ ಹಾಗೂ ಮಾತುಗಳ ಬಗ್ಗೆ ಎಲ್ಲಾ ಸಂಸದರಿಗೂ ಗೊತ್ತು. ಅದರ ಹೊರತಾಗಿಯೂ ನಾನು ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಿದ್ದೇನೆ ಎನ್ನುವುದಾದರೆ ಕ್ಷಮೆ ಕೇಳುತ್ತೇನೆ ಎಂದು, ಕ್ಷಮೆಯಾಚಿಸಿ ಕುಳಿತರು.
Advertisement
ಬಳಿಕ ಮಾತು ಆರಂಭಿಸಿದ ಬಿಜೆಪಿ ಸಂಸದೆ, ಡೆಪ್ಯುಟಿ ಸ್ಪೀಕರ್ ರಮಾದೇವಿ ಅವರು, ನಿಮ್ಮ ಕ್ಷಮೆಯನ್ನು ಸ್ವೀಕರಿಸುವುದಿಲ್ಲ. ನಾನು ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದೆ. ಆಗ ಅಜಂ ಖಾನ್ ಹಾಗೇ ಮಾತನಾಡಿದ್ದಾರೆ. ಸ್ಪೀಕರ್ ಸ್ಥಾನದ ಗೌರವ ಇವರಿಗೆ ಗೊತ್ತಿಲ್ಲ. ಆ ಸನ್ನಿವೇಶವನ್ನು ದೇಶದ ಜನರು ನೋಡಿದ್ದಾರೆ. ಸದನದಲ್ಲಿ ಅಷ್ಟೇ ಅಲ್ಲ ಹೊರಗಡೆಯೂ ಹೀಗೆ ಬಾಯಿ ಹರಿಬಿಡುತ್ತಾರೆ. ಅವರಿಗೆ ನಾಲಿಗೆ ಮೇಲೆ ಹಿಡಿತವೇ ಇಲ್ಲ ಎಂದು ಗುಡುಗಿದರು.
Advertisement
Advertisement
ಈ ವೇಳೆ ಅಜಂ ಖಾನ್ ಪರ ಎಸ್‍ಪಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಧ್ವನಿ ಏರಿಸುತ್ತಿದ್ದಂತೆ ಗರಂ ಆದ ರಮಾದೇವಿ ಅವರು, ಅಜಂ ಖಾನ್ ಬೆಂಬಲಕ್ಕೆ ಯಾಕೆ ನಿಲ್ಲುತ್ತಿಯಾ? ನಾನು ಮಾತುನಾಡುತ್ತೇನೆ ಅದನ್ನು ಮೊದಲು ಕೇಳು. ಅವರಿಂದ ನಾವೇಕೆ ಕ್ಷಮೆ ನಿರೀಕ್ಷೆ ಮಾಡಬೇಕು. ಜನರ ಸೇವೆಗಾಗಿ ಸಂಘರ್ಷ ಮಾಡುತ್ತಾ ಸಂಸತ್ ಬಂದಿದ್ದೇನೆಯೇ ಹೊರತು ನಿಮ್ಮ ಮಾತುಗಳನ್ನು ಕೇಳಲು ಇಲ್ಲಿಗೆ ಬಂದಿಲ್ಲ ಎಂದು ಏಕ ವಚನದಲ್ಲೇ ಕಿಡಿಕಾರಿದರು.
Advertisement
ಈ ಹಿಂದೆ ಆಗಿದ್ದೇನು?:
ತ್ರಿವಳಿ ತಲಾಖ್ ಕುರಿತು ಲೋಕಸಭೆಯಲ್ಲಿ ಗುರುವಾರ ಗಂಭೀರ ಚರ್ಚೆ ನಡೆದಿತ್ತು. ಈ ವೇಳೆ ಸ್ಪೀಕರ್ ಸ್ಥಾನದಲ್ಲಿದ್ದ ಬಿಜೆಪಿಯ ಸಂಸದೆ ರಮಾದೇವಿ ಅವರ ಕಡೆಗೆ ನೋಡಿದ ಅಜಂ ಖಾನ್, ನೀವು ಎಂದರೆ ನನಗೆ ತುಂಬಾ ಇಷ್ಟ. ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡಬೇಕು ಎನಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅಜಂ ಖಾನ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ರಮಾದೇವಿ ಅವರು, ಸಂಸದರಾಗಿ ಹೀಗೆ ಮಾತನಾಡುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ ಎಂದು ಗುಡುಗಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಅಜಂ ಖಾನ್ ಅವರು, ನೀವು ನನ್ನ ಸಹೋದರಿ ಸಮಾನ. ಆ ದೃಷ್ಟಿಯಿಂದ ಮಾತನಾಡಿದೆ ಅಷ್ಟೇ ಎಂದು ಹೇಳಿ ಜಾರಿಕೊಂಡಿದ್ದರು.
ಆಡಳಿತ ಪಕ್ಷದ ಸದಸ್ಯರು, ಅಜಂ ಖಾನ್ ಸದನಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಆದರೆ ಕ್ಷಮೆ ಯಾಚಿಸಲು ನಿರಾಕರಿಸಿದ ಅಜಾಂ ಖಾನ್, ಅಸಂಸದೀಯ ಪದವನ್ನು ನಾನು ಬಳಸಿಲ್ಲ. ಬೇಕಾದರೆ ರಾಜೀನಾಮೆ ನೀಡುತ್ತೇನೆ. ಕ್ಷಮೆ ಕೇಳುವುದಿಲ್ಲ ಎಂದು ಕಲಾಪದಿಂದ ಹೊರನಡೆದಿದ್ದರು. ಈ ವೇಳೆ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಅವರು, ಅಜಂ ಖಾನ್ ಮಾತು ಕವಿತೆಯಂತಿತ್ತು. ಅದರಲ್ಲೇನು ತಪ್ಪಿದೆ ಅಂತ ಸಮರ್ಥಿಸಿಕೊಂಡು ಸದನದಿಂದ ನಿರ್ಗಮಿಸಿದ್ದರು.
ಅಜಂ ಖಾನ್ ರಾಜೀನಾಮೆಗೆ ಬಿಜೆಪಿ ಸಂಸದರು ಪಟ್ಟು ಹಿಡಿದು ಕುಳಿತಿದ್ದಾರೆ. ಜೊತೆಗೆ ಪಕ್ಷಾತೀತವಾಗಿ ಮಹಿಳಾ ಸಂಸದರು ಅಜಂ ಖಾನ್ ವಿರುದ್ಧ ಗುಡುಗಿದ್ದಾರೆ. ಹೀಗಾಗಿ ಅವರ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳಲಾಗುತ್ತದೆ ಎಂದು ಸ್ಪೀಕರ್ ಓಂ ಬಿರ್ಲಾ ಭರವಸೆ ನೀಡಿದ್ದಾರೆ.
ಈ ಸಂಬಂಧ ಮಾಯಾವತಿ ಅವರು ಕೂಡ ಟ್ವೀಟ್ ಮಾಡಿದ್ದು, ಎಸ್‍ಪಿ ಸಂಸದರ ಹೇಳಿಕೆ ಹೇಳಿಕೆ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದು, ನೋವು ತಂದಿದೆ. ಅಜಂ ಖಾನ್ ಅವರ ಹೇಳಿಕೆ ಅತ್ಯಂತ ಖಂಡನೀಯ. ಅವರು ಲೋಕಸಭೆಯಲ್ಲಿ ಅಷ್ಟೇ ಅಲ್ಲದೆ ಎಲ್ಲಾ ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.