ಮಡಿಕೇರಿ: ಮಂಜಿನ ನಗರಿ ಮಡಿಕೇರಿ ನಗರದ ಮುತ್ತಪ್ಪ ದೇವಾಲಯ ಆವರಣದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇಂದು ವರ್ಷದ ಮಕರ ಸಂಕ್ರಾಂತಿ ಉತ್ಸವವು ವಿಶೇಷ ದೈವಿಕ ಕೈಂಕರ್ಯಗಳೊಂದಿಗೆ ನೆರವೇರಿತು.
ಮಂಗಳವಾರ ಸಂಜೆಯಿಂದಲೂ ಸನ್ನಿಧಿಯಲ್ಲಿ ನಿರ್ಮಾಲ್ಯ ವಿಸರ್ಜನೆ, ಉಷಾ ಪೂಜೆ, ಗಣಹೋಮ ಹಾಗೂ ಶ್ರೀ ಮುತ್ತಪ್ಪ ಮತ್ತು ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ನಡೆಸಲಾಯಿತು. ಇಂದು ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ತುಪ್ಪಾಭಿಷೇಕ, ಕ್ಷೀರಾಭಿಷೇಕ, ಭಷ್ಮಾಭಿಷೇಕ, ಎಳನೀರು ಅಭಿಷೇಕ, ಪುಷ್ಪಾರ್ಚನೆಯೊಂದಿಗೆ ಅಲಂಕಾರ ಪೂಜೆ ಜರುಗಿತು. ಅಲ್ಲದೆ ಶ್ರೀ ಅಯ್ಯಪ್ಪ ಉತ್ಸವ ಮೂರ್ತಿಯ ಕ್ಷೇತ್ರ ಪ್ರದಕ್ಷಿಣೆಯೊಂದಿಗೆ ಬಲಿ ಪೂಜೆಯ ಬಳಿಕ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಯಿತು.
Advertisement
Advertisement
ನಂತರ ಭಕ್ತರಿಗೆ ಪ್ರಸಾದದೊಂದಿಗೆ ಅನ್ನಸಂತರ್ಪಣೆ ನೆರವೇರಿತು. ಮಕರ ಸಂಕ್ರಾಂತಿ ಪ್ರಯುಕ್ತ ಮುಸ್ಸಂಜೆಯಲ್ಲಿ ವಿಶೇಷ ಭಜನಾ ಕಾರ್ಯಕ್ರಮದ ಬಳಿಕ ದೇವರಿಗೆ ಪಡಿಪೂಜೆ ಹಾಗೂ ದೀಪಾರಾಧನೆಯೊಂದಿಗೆ ರಾತ್ರಿ ಮಹಾಸೇವೆ ಬಳಿಕ ಪ್ರಸಾದ ವಿನಿಯೋಗ ನೆರವೇರಿತು. ದೇವರಿಗೆ ವಿಶೇಷ ಚಂಡು ಸೇವೆಯೊಂದಿಗೆ ಮಂಗಳವಾದ್ಯಗಳನ್ನು ಮಹಾಪೂಜೆ ವೇಳೆ ನುಡಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಪೂಜೆ ಹಾಗೂ ಅನ್ನದಾನದಲ್ಲಿ ಪಾಲ್ಗೊಂಡಿದ್ದರು.