ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದ ಆಯುಷ್ಮಾನ್ ಸೇವಾ ಕೇಂದ್ರ ಇದೀಗ ತನ್ನ ನೋಂದಣಿ ಕಾರ್ಯವನ್ನು ಸ್ಥಗಿತಗೊಳಿಸಿದೆ.
ಕಳೆದ ಒಂದು ತಿಂಗಳುಗಳ ಹಿಂದಿನಿಂದಲೇ ಕುಮುಟಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾರಂಭಗೊಂಡಿದ್ದ ಆಯುಷ್ಮಾನ್ ಸೇವಾ ಕೇಂದ್ರದಲ್ಲಿ ಸಾಕಷ್ಟು ತಾಂತ್ರಿಕ ದೋಷಗಳು ಎದುರಾಗುತ್ತಲೇ ಇದ್ದವು. ದೂರ ಸಂಪರ್ಕ ಹಾಗೂ ಸರ್ವರ್ ಸಮಸ್ಯೆಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣೆಯಲ್ಲಿ ಪದೇ ಪದೇ ಕಿರಿಕಿರಿಯನ್ನು ಸಾರ್ವಜನಿಕರು ಅನುಭವಿಸುವಂತಾಗಿತ್ತು. ಆದರೆ ಇದೀಗ ಹೊಸ ವರ್ಷಾರಂಭದಿಂದ ಸಂಪೂರ್ಣವಾಗಿ ಆಯುಷ್ಮಾನ್ ಕಾರ್ಡ್ ವಿತರಣೆ ನಿಲ್ಲಿಸಲಾಗಿದೆ.
Advertisement
ಇದರಿಂದಾಗಿ ಸರತಿಯಲ್ಲಿ ಕಾಯುತ್ತಿದ್ದ ಸುಮಾರು 400ಕ್ಕೂ ಹೆಚ್ಚು ಮಂದಿ ಫಲಾನುಭವಿಗಳಿಗೆ ಕಾರ್ಡುಗಳು ವಿತರಣೆಯಾಗದೆ ಹಾಗೆಯೇ ಉಳಿದಿದ್ದು, ಜನ ಪರದಾಡುತ್ತಿದ್ದಾರೆ. ಈ ಸಮಸ್ಯೆ ಕೇವಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾತ್ರವಲ್ಲದೇ ಇತರೆ ಖಾಸಗಿ ಸೇವಾ ಕೇಂದ್ರಗಳಲ್ಲೂ ನೆಟ್‍ವರ್ಕ್ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ.
Advertisement
Advertisement
ಬೆಳಗ್ಗೆ 9ರಿಂದ 10 ಗಂಟೆಯ ನಡುವೆ ಸ್ವಲ್ಪ ಮಟ್ಟಿಗೆ ಸರ್ವರ್ ಸರಿ ಇರುತ್ತದೆ. ಬಳಿಕ ಎಲ್ಲಾ ಸೇವಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಒತ್ತಡ ಸೃಷ್ಟಿಯಾಗಿ ಕೆಲವೇ ನಿಮಿಷಗಳಲ್ಲಿ ನೆಟ್‍ವರ್ಕ್ ಕಡಿತಗೊಳ್ಳುತ್ತದೆ ಎನ್ನುವುದು ಸೇವಾ ಕೇಂದ್ರದ ಸಿಬ್ಬಂದಿಯ ಅಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ದಾಖಲಾತಿ, ಸೌಲಭ್ಯಗಳ ನೋಂದಣಿ ಹಾಗೂ ವಿತರಣೆಗಾಗಿ ಇಂಟರ್‌ನೆಟ್ ಮೂಲಕ ಡಿಜಿಟಲ್ ವ್ಯವಸ್ಥೆಯಡಿಯೇ ನಡೆಯುತ್ತಿದೆ.
Advertisement
ಆಧಾರ್ ಕಾರ್ಡಿನಿಂದ ಆರಂಭಿಸಿ ಪ್ರತಿಯೊಂದು ಸೇವಾ ವ್ಯವಸ್ಥೆಯೂ ದೋಷಪೂರಿತವಾಗಿದ್ದು, ಸೇವಾ ಕೇಂದ್ರಗಳ ಸಂಖ್ಯೆಯೂ ತೀರಾ ಕಡಿಮೆಯಾಗಿದೆ. ಇದರ ದುಷ್ಪರಿಣಾಮವನ್ನು ಸಾರ್ವಜನಿಕರು ಅನುಭವಿಸಬೇಕಾಗಿದೆ. ಉತ್ತರ ಕನ್ನಡ ಜಿಲ್ಲಾದ್ಯಂತ ಇದೇ ಸ್ಥಿತಿ ಇದೆ. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಹೀಗೆ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಸಂಪೂರ್ಣ ಆಯುಷ್ಯ ಕಳೆದುಕೊಂಡಿದೆ.