ಬೀಜಿಂಗ್: ಕಾರ್ಕಳದ ಆಯುಷ್ ಶೆಟ್ಟಿ(Ayush Shetty) ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ 2026 (Badminton Asia Championships 2026) ಟೂರ್ನಿಯಲ್ಲಿ ಬೆಳ್ಳಿ (Silver) ಗೆಲ್ಲುವ ಮೂಲಕ ಭಾರತದ (India) ಪರ ದಾಖಲೆ ನಿರ್ಮಿಸಿದ್ದಾರೆ.
ಚೀನಾದ ನಿಂಗ್ಬೋ (Ningbo) ನಗರದಲ್ಲಿ ನಡೆದ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಚೀನಾದ ಶಿ ಯುಕಿ (Shi Yuqi) ವಿರುದ್ಧ 8-21, 10-21 ಅಂತರದಿಂದ ಸೋಲುವ ಮೂಲಕ ಎರಡನೇ ಸ್ಥಾನ ಪಡೆದರು.
1965 ರಿಂದ ಇಲ್ಲಿಯವರೆಗೆ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಯಾವುದೇ ಸ್ಪರ್ಧಿ ಪದಕವನ್ನು ಗೆದ್ದಿರಲಿಲ್ಲ. 61 ವರ್ಷದ ಬಳಿಕ ಭಾರತ ಪರ ಬೆಳ್ಳಿ ಗೆಲ್ಲುವ ಮೂಲಕ ಆಯುಷ್ ಶೆಟ್ಟಿ ಇತಿಹಾಸ ನಿರ್ಮಿಸಿದ್ದಾರೆ.
ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ 20 ವರ್ಷದ ಆಯುಷ್ ಶೆಟ್ಟಿ ಸೆಮಿಫೈನಲ್‌ನಲ್ಲಿ ವಿಶ್ವದ ನಂ. 1 ಆಟಗಾರ ಹಾಗೂ ಹಾಲಿ ವಿಶ್ವ ಚಾಂಪಿಯನ್ ಆಗಿರುವ ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡ್ಸರ್ನ್ ಅವರನ್ನು ಸೋಲಿಸಿ ಸಂಚಲನ ಮೂಡಿಸಿದ್ದರು.

2023 ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಇವರು ಯುಎಸ್ ಓಪನ್ ಸೂಪರ್ 300 ಚಾಂಪಿಯನ್ ಆಗಿದ್ದರು. 6 ಅಡಿ 4 ಇಂಚು ಎತ್ತರ ಹೊಂದಿರುವ ಆಯುಷ್ ಶೆಟ್ಟಿ ಭರ್ಜರಿ ಸ್ಮ್ಯಾಶ್ ಹೊಡೆಯುವ ಮೂಲಕವೇ ಹೆಸರು ಪಡೆದಿದ್ದಾರೆ. ಇದನ್ನೂ ಓದಿ: US Open 2025 Badminton | ಕಾರ್ಕಳ ಮೂಲದ 20 ವರ್ಷದ ಆಯೂಷ್ ಶೆಟ್ಟಿ ಚಾಂಪಿಯನ್
ಈಗ ಇವರು ವಿಮಲ್ ಕುಮಾರ್ ಮತ್ತು ಸಾಗರ್ ಚೋಪ್ರಾ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

