ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಆಯುಷ್ ಬದೋನಿ ಕಹಾನಿ

Public TV
2 Min Read
AISH BADHONI 5

ಮುಂಬೈ: 15ನೇ ಐಪಿಎಲ್ ಪಂದ್ಯಾವಳಿ ಆರಂಭದಿಂದಲೇ ಭರ್ಜರಿ ರಸದೌತಣ ಉಣಬಡಿಸಿದೆ. ಅದರಲ್ಲೂ ಈ ಬಾರಿಯ ನೂತನ ಸ್ಟಾರ್ ಎಂಬಂತೆ ಲಕ್ನೋ ತಂಡದ ಆಯುಷ್ ಬದೋನಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ.

AISH BADHONI

15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಬದೋನಿ ಹೆಸರು ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ಕೇಳಿರಲಿಲ್ಲ. ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿಕೊಂಡ ಬಳಿಕ ಬದೋನಿ ತನ್ನ ಅಸಲಿ ಸಾಮರ್ಥ್ಯವನ್ನು ಅನಾವರಣಗೊಳಿಸಿದ್ದಾರೆ. ಡೆಬ್ಯು ಪಂದ್ಯದಲ್ಲೇ ತಾನೇನು, ತನ್ನ ತಾಕತ್ತೇನು ಅನ್ನೋದನ್ನ ಪ್ರೂವ್ ಮಾಡಿದ್ದ ಬದೋನಿ, ಎರಡನೇ ಪಂದ್ಯದಲ್ಲಿ ತನ್ನ ಬ್ಯಾಟಿಂಗ್ ವೈಭವ ಮುಂದುವರಿಸಿ ರಾತ್ರೋ ರಾತ್ರಿ ಕ್ರಿಕೆಟ್ ಪ್ರೇಮಿಗಳ ಹೃದಯಕ್ಕೆ ಲಗ್ಗೆಯಿಟ್ಟಿದ್ದಾರೆ. ಇದನ್ನೂ ಓದಿ: ಲೆವಿಸ್, ಬದೋನಿ ಸಿಕ್ಸರ್‌ಗಳ ಸುರಿಮಳೆ – ಲಕ್ನೋಗೆ ರೋಚಕ ಜಯ

AISH BADHONI 4

ಬದೋನಿ ಡೆಲ್ಲಿ ಮೂಲದ 22ರ ಹರೆಯದ ಆಟಗಾರ. ದೆಹಲಿ ರಾಜ್ಯ ರಣಜಿ ತಂಡದ ಪರ ಆಡುವ ವಿಶ್ವಾಸದಲ್ಲಿದ್ದ ಬದೋನಿಗೆ 15ನೇ ಆವೃತ್ತಿ ಐಪಿಎಲ್ ಹೊಸ ದಾರಿ ತೋರಿದೆ. ಕೇವಲ 20 ಲಕ್ಷ ರೂ.ಗೆ ಲಕ್ನೋ ತಂಡ ಸೇರಿಕೊಂಡ ಬದೋನಿಗೆ ಮೊದಲ ಪಂದ್ಯದಲ್ಲೇ ಲಕ್ನೋ ತಂಡ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿತು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡ ಚಿಗುರು ಮೀಸೆಯ ಈ ಹುಡುಗ ಬ್ಯಾಟ್ ಇರುವುದೇ ಬೌಲರ್‌ಗಳನ್ನು ದಂಡಿಸಲು ಎಂಬಂತೆ ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡು ಮುಟ್ಟಿಸಬಲ್ಲ ಸಾಹಸಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ: ನನ್ನ ಹೆಸರಿಟ್ಟಿದ್ದಕ್ಕೇ ಒಂದೊಂದು ಕಥೆ ಕಟ್ಟಿದ್ದರು ಅಪ್ಪ, ಅಮ್ಮ: ರಾಹುಲ್

AISH BADHONI 1

ಆಡಿದ ಮೊದಲ ಪಂದ್ಯದಲ್ಲೇ 55 ರನ್ (41 ಎಸೆತ, 6 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದರೆ, ಎರಡನೇ ಪಂದ್ಯದಲ್ಲಿ ಒತ್ತಡದ ಸಮಯದಲ್ಲಿ ಎದೆಗುಂದದೇ ದಿಟ್ಟ ಇನ್ನಿಂಗ್ಸ್ ಕಟ್ಟಿದ ಡೆಲ್ಲಿ ಹುಡುಗ 19 ರನ್ (9 ಎಸೆತ, 2 ಸಿಕ್ಸ್) ಸಿಡಿಸಿ ಮಿಂಚಿದ್ದರು. ಈ ಮೂಲಕ 15ನೇ ಆವೃತ್ತಿ ಐಪಿಎಲ್‍ನಲ್ಲಿ ಉದಯಗೊಂಡ ನೂತನ ಸ್ಟಾರ್ ಎನಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗ ಟ್ಯಾಲೆಂಟ್ ಬಳಸಿಕೊಂಡು ಅಬ್ಬರಿಸುತ್ತಿರುವ ಡೆಲ್ಲಿ ಬಾಯ್ ಇಂತಹ ಮತ್ತಷ್ಟು ಇನ್ನಿಂಗ್ಸ್‌ಗಳಿಂದ ಅಭಿಮಾನಿಗಳನ್ನು ರಂಜಿಸಲಿ. ಈ ಬಾರಿ ಬದೋನಿ ಐಪಿಎಲ್‍ನಲ್ಲಿ ರನ್ ಹೊಳೆ ಹರಿಸಲಿ ಎಂಬುದು ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *