– ಪಬ್ಲಿಕ್ ಟಿವಿ ಕಚೇರಿಯಲ್ಲೂ ಆಯುಧಪೂಜೆ
ಬೆಂಗಳೂರು: ನಾಡಿನಾದ್ಯಂತ ಇಂದು ಆಯುಧ ಪೂಜೆಯ (Ayudha Pooja) ಸಂಭ್ರಮ. ದಸರಾ ಹಬ್ಬದ ಒಂಭತ್ತನೇ ದಿನವಾದ ನವಮಿಯಂದು ಆಯುಧಗಳ ಪೂಜೆ ಮಾಡಿ ಹಬ್ಬ ಮಾಡುವುದು ಸಂಪ್ರದಾಯ. ಸಿಲಿಕಾನ್ ಸಿಟಿಯಲ್ಲಿ ಆಯುಧ ಪೂಜೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.
ವನವಾಸಕ್ಕೆ ಹೊರಟ ಪಂಡವರು ತಮ್ಮ ಆಯುಧಗಳನ್ನ ಯಾರಿಗೂ ಕಾಣದಂತೆ ಇಟ್ಟು, ವನವಾಸ ಅಜ್ಞಾತವಾಸ ಮುಗಿಸಿದ ಬಳಿಕ ತಮ್ಮ ಆಯುಧಗಳನ್ನ ಮತ್ತೆ ತೆಗದುಕೊಂಡು ಪೂಜಿಸಿದ ದಿನವಿದು. ಹೀಗಾಗಿ, ಜನರು ತಮ್ಮ ಮನೆಗಳ ಆಯುಧಗಳನ್ನ ಶುದ್ದ ಮಾಡಿ, ಅಲಂಕಾರ ಮಾಡಿ ಪೂಜಿಸುತ್ತಾರೆ. ಜೊತೆಗೆ ವಾಹನಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದನ್ನೂ ಓದಿ: ತಾಯಿ ಚಾಮುಂಡೇಶ್ವರಿ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತೆ: ಸಿಎಂ
ಆಯುಧ ಪೂಜೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಜನ ಶಕ್ತಿ ದೇವತೆಗಳ ದರ್ಶನ ಮಾಡಿ ಆಯುಧಗಳ ಪೂಜೆ ಮಾಡಿದರು. ಬೆಂಗಳೂರು ಸರ್ಕಲ್ ಮಾರಮ್ಮ ದೇವಾಲಯದ ಮುಂದೆ ಬೆಳಗ್ಗೆಯಿಂದಲೇ ಸಾವಿರಾರು ಜನರ ತಮ್ಮ ವಾಹನಗಳನ್ನ ತಂದು ಪೂಜೆ ಮಾಡಿಸಿದರು.
ನಗರದ ಕಾಳಿ ದೇವಿ ಬಂಡೆಮಹಾಕಾಳಿ ದೇವಾಲಯದಲ್ಲಿ ಭಕ್ತರ ಸಾಗರವೇ ತುಂಬಿತ್ತು. ಮಹಾಕಾಳಿ ದೇವಿಯ ಆಯುಧಗಳನ್ನ ದೇವಾಲಯದಲ್ಲಿ ವಿಶೇಷ ಹೋಮ ಮಾಡಿ, ಪೂಜಿಸಲಾಯಿತು. ದೇವಾಲಯದಲ್ಲಿ ಭಕ್ತರು ದೇವಿ ದರ್ಶನ ಪಡೆದು, ಆಯುಧ ಪೂಜೆಯಂದು ತಮಗೂ ಒಳಿತನ್ನ ಮಾಡಲಿ ಎಂದು ತಾಯಿಯ ಬಳಿ ಬೇಡಿಕೊಂಡರು. ನಾಳೆ ದಶಮಿಯ ಪ್ರಯುಕ್ತ, ದೇವಾಲಯದ ಆವರಣದಲ್ಲಿ ಬನ್ನಿ ಮರ ಕಡೆದು, ಪಟ್ಟದ ತಾಯಿಯ ಮೆರವಣಿಗೆ ಮಾಡಲಿದ್ದಾರೆ. ಇದನ್ನೂ ಓದಿ: ನವರಾತ್ರಿ ವಿಶೇಷ: ಆಯುಧ ಪೂಜೆ ಯಾಕೆ ಮಾಡಲಾಗುತ್ತದೆ? ಏನಿದರ ಮಹತ್ವ?
ಮೈಸೂರು ರಸ್ತೆ ಶಿರಸಿ ಸರ್ಕಲ್ ಸಿಎಆರ್ ಕೇಂದ್ರ ಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಹಾರ್ಮೊರಿ, ವೆಪೆನ್‌ಗಳು, ಸಿಎಆರ್ ಹೆಡ್ ಕ್ವಾರ್ಟರ್‌ನ ಶಸ್ತ್ರಾಗಾರದಲ್ಲಿ ಬಂದೂಕುಗಳು, ರೈಫಲ್‌ಗಳಿಗೆ, ಸಿಎಆರ್ ವಾಹನಗಳನ್ನು ಹೂಗಳಿಂದ ಸಿಂಗರಿಸಿ ಪೂಜೆ ಮಾಡಲಾಯ್ತು. ಬಾಳೆಕಂದು ಕತ್ತರಿಸಿ ಪೂಜೆ ನೆರವೇರಿಸಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸಿಎಆರ್ ಹೆಡ್ ಕ್ವಾಟರ್ ಡಿಸಿಪಿ ಡಿ.ಎಲ್.ನಾಗೇಶ್ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳ ಪೂಜೆಯಲ್ಲಿ ಭಾಗಿಯಾಗಿದ್ದರು.
ಪಬ್ಲಿಕ್ ಟಿವಿ ಕಚೇರಿಯಲ್ಲೂ ಆಯುಧಪೂಜೆ
ಕನ್ನಡದ ಸುದ್ದಿವಾಹಿನಿ ‘ಪಬ್ಲಿಕ್ ಟಿವಿ’ ಕಚೇರಿಯಲ್ಲೂ ಆಯುಧಪೂಜೆ ಆಚರಿಸಲಾಯಿತು. ಇಂದು ಬೆಳಗ್ಗೆ ಕಚೇರಿಯಲ್ಲಿ ವಾಹನಗಳಿಗೆ ಪೂಜೆ ನೆರವೇರಿಸಿ ಸಿಬ್ಬಂದಿಗೆ ಸಿಹಿ ಹಂಚಲಾಯಿತು.