ಬೆಂಗಳೂರು: ಪಂಚಾಯ್ತಿ ಸದಸ್ಯರ ಹೋರಾಟಕ್ಕೆ ಮಣಿದು `ಅಯೋಗ್ಯ’ ಚಿತ್ರತಂಡ ಟ್ಯಾಗ್‍ಲೈನನ್ನು ತೆಗೆದುಹಾಕಿದೆ.
ಚಿತ್ರದ ಹೆಸರು ಮತ್ತು ಟ್ಯಾಗ್ ಲೈನ್ ನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಅಯೋಗ್ಯ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಬೇಕು ಎನ್ನುವಷ್ಟರಲ್ಲಿ ಟ್ಯಾಗ್ ಲೈನ್ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಅಯೋಗ್ಯ ಚಿತ್ರಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಎನ್ನುವ ಟ್ಯಾಗ್ ಲೈನನ್ನು ಇಟ್ಟುಕೊಂಡಿದ್ದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ನಿರ್ಮಾಪಕರ ವಿರುದ್ಧ ಚಲನಚಿತ್ರ ಮಂಡಳಿಯ ಬಳಿ ಪ್ರತಿಭಟನೆ ನಡೆಸಿ ಟ್ಯಾಗ್ ಲೈನನ್ನು ತೆಗೆದು ಹಾಕುವಂತೆ ಆಗ್ರಹಿಸಿದ್ದರು.
ಈ ಹಿಂದೆಯೇ ಟ್ಯಾಗ್ ಲೈನ್ ಬದಲಾವಣೆ ಮಾಡಬೇಕು ಎನ್ನುವ ಒತ್ತಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದಿತ್ತು. ಇದೆ ವಿಚಾರವಾಗಿ ಭಾನುವಾರ ಗ್ರಾಮಪಂಚಾಯಿತಿ ಸದಸ್ಯರಾದ ರೇವತಿ, ಲಕ್ಷ್ಮಿ ಗೌಡ ಎನ್ನುವವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.
ಈ ಕುರಿತು ಸೋಮವಾರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಾದ ಚಿನ್ನೇಗೌಡ್ರು ಹಾಗೂ ಕರಿಸುಬ್ಬು ಚರ್ಚೆ ಮಾಡಿ ನಂತರ ಸಿನಿಮಾ ಕಲಾವಿದರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಜೊತೆಯಲ್ಲೂ ಮಾತನಾಡಿ ಟ್ಯಾಗ್ ಲೈನ್ ತೆಗೆಯುವಂತೆ ನಿರ್ಧಾರ ಮಾಡಿದ್ದಾರೆ.
ಇಂದಿನಿಂದ ಕೇವಲ ‘ಅಯೋಗ್ಯ’ ಅನ್ನೋ ಟೈಟಲ್ ಮಾತ್ರ ಎಲ್ಲೆಡೆ ಬಳಸಿಕೊಳ್ಳಲು ಚಿತ್ರತಂಡ ಸಮ್ಮತಿ ನೀಡಿದೆ. ಶೀರ್ಷಿಕೆ ಅಡಿ ಇದ್ದ ಗ್ರಾಮ ಪಂಚಾಯಿತಿ ಸದಸ್ಯ ಅನ್ನೋ ಅಡಿ ಬರಹವನ್ನು ತೆಗೆದು ಹಾಕಿದ್ದಾರೆ. ರಾಜ್ಯದಲ್ಲಿರುವ 76,367 ಪಂಚಾಯಿತಿ ಸದಸ್ಯರಿಗೆ ಗೌರವ ಕೊಡುವ ಉದ್ದೇಶದಿಂದ ಟೈಟಲ್ ಟ್ಯಾಗ್ ಲೈನ್ ಕೈ ಬಿಡಲು ನಿರ್ಮಾಪಕ ಟಿ ಆರ್ ಚಂದ್ರಶೇಖರ್, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ನಟ ಸತೀಶ್ ನಿರ್ಧಾರ ಮಾಡಿದ್ದಾರೆ.