ಬೆಂಗಳೂರು: ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇಂದು ನಿಗದಿಯಾಗಿದ್ದ ಕೆಲವೊಂದು ವಿವಿಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ರಾಜ್ಯಾದ್ಯಂತ ಬಸ್ ಸಂಚಾರ ಯಥಾಸ್ಥಿತಿಯಲ್ಲಿದೆ. ಬೆಳಗ್ಗೆಯಿಂದಲೇ ಬಸ್‍ಗಳ ಓಡಾಟ ಮಾಮೂಲಿನಂತೆ ಇದೆ. ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಬಿಎಂಟಿಸಿ ಬಸ್‍ಗಳೂ ಸಂಚರಿಸುತ್ತಿವೆ. ಮೆಟ್ರೋ ಸಂಚಾರ ಕೂಡ ಮಾಮೂಲಿನಂತೆ ಇದೆ. ಆಟೋ, ಟ್ಯಾಕ್ಸಿಗಳು ಓಡಾಡುತ್ತಿವೆ. ಯಾವುದೇ ಆತಂಕವಿಲ್ಲದೆ ನಿಶ್ಚಿಂತೆಯಿಂದ ಓಡಾಡಬಹುದು.
Advertisement
Advertisement
ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಿಗಿಭದ್ರತೆ ಮಾಡಲಾಗಿದೆ. ಶಿವಾಜಿನಗರ, ಕೆಜಿ ಹಳ್ಳಿ, ಡಿಜಿ ಹಳ್ಳಿ, ಟ್ಯಾನರಿ ರಸ್ತೆ, ಕೆ.ಆರ್ ಮಾರ್ಕೆಟ್, ಗೋರಿಪಾಳ್ಯದಲ್ಲಿ ಹೈ ಅಲರ್ಟ್ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ, ಕಟ್ಟೆಚ್ಚರಕ್ಕೆ ಆದೇಶ ನೀಡಿದ್ದಾರೆ.
Advertisement
ಹೋಂಗಾರ್ಡ್‍ಗಳೂ ಸೇರಿದಂತೆ ಸುಮಾರು 10,000ಕ್ಕೂ ಹೆಚ್ಚಿನ ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಯಾಗಿದ್ದು, ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸೋಷಿಯಲ್ ಮೀಡಿಯಾ ಮೇಲೆ ಕಣ್ಗಾವಲು ಇರಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.
ಪ್ಯಾರಾ ಮಿಲಿಟರಿ ಪಡೆ, ಕೆಎಸ್‍ಆರ್ ಪಿ ತುಕಡಿ, ಸಿಎಆರ್ ತುಕಡಿ ಸೇರಿ 6 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ. ಮೆರವಣಿಗೆ, ಘೋಷಣೆ ಕೂಗುವುದಕ್ಕೆ ನಿರ್ಬಂಧ ಹೇರಲಾಗಿದೆ. ತ್ರಿಬಲ್ ರೈಡ್ ಮಾಡುವವರ ವಿರುದ್ಧ ಕ್ರಮ ಹಾಗೂ ಕ್ರಿಮಿನಲ್ ಗೂಂಡಾಗಳ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.
ಬೆಂಗಳೂರಷ್ಟೇ ಅಷ್ಟೇ ಅಲ್ಲ ರಾಜ್ಯಾದ್ಯಂತಲೂ ಹೈ ಅಲರ್ಟ್ ಘೋಷಿಸಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರನ್ನು ಅತಿಸೂಕ್ಷ್ಮ ಜಿಲ್ಲೆಗಳೆಂದು ಘೋಷಿಸಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾಂಸ್ಕೃತಿಕ ಕ ನಗರಿ ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ, ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಹೆಜ್ಜೆಹೆಜ್ಜೆಗೂ ಖಾಕಿ ಕಣ್ಗಾವಲು ಇರಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.