ಅಯೋಧ್ಯೆ ತೀರ್ಪು- ಹಿಂದೂ ಮಹಾಸಭಾದಿಂದಲೂ ಮರು ಪರಿಶೀಲನಾ ಅರ್ಜಿ ಸಲ್ಲಿಕೆ

Public TV
2 Min Read
hindu mahasabha

ನವದೆಹಲಿ: ಅಯೋಧ್ಯೆ ತೀರ್ಪು ಪ್ರಶ್ನಿಸಿ ಜಮಿಯತ್-ಉಲಮಾ-ಎ ಹಿಂದ್ ಸೇರಿದಂತೆ ಐದು ಜನರ ನಂತರ ಇದೀಗ ಹಿಂದೂ ಮಹಾಸಭಾ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.

ಹಿಂದೂಗಳ ಪರವಾಗಿ ಸಲ್ಲಿಸಿದ ಮೊದಲ ಮರುಪರಿಶೀಲನಾ ಅರ್ಜಿ ಇದಾಗಿದ್ದು, ಮುಸ್ಲಿಮರಿಗೆ ಮಸೀದಿ ನಿರ್ಮಾಣ ಮಾಡಲು ಪ್ರತ್ಯೇಕ ಸ್ಥಳದಲ್ಲಿ 5 ಎಕರೆ ಜಾಗವನ್ನು ಕೊಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದೀಗ ಇದನ್ನು ವಿರೋಧಿಸಿ ಹಿಂದೂ ಮಹಾಸಭಾ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.

ನವೆಂಬರ್ 9ರಂದು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಪರ ಸಂಘಟನೆಗಳು ಈಗಾಗಲೇ 6 ಮರು ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿವೆ. ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸುವಂತೆ ಹಾಗೂ ಮುಸ್ಲಿಮರಿಗೆ ಪ್ರತ್ಯೇಕವಾಗಿ 5 ಎಕರೆ ಜಾಗವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

AYODHYA SUPREME

ಹಿಂದೂ ಮಹಾಸಭಾ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಈ ಕುರಿತು ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿವಾದಿತ ಸ್ಥಳದ ಹೊರ ಭಾಗ ಹಾಗೂ ಒಳ ಭಾಗ ಹಿಂದೂಗಳಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಿರುವಾಗ ಮುಸ್ಲಿಮರಿಗೆ 5 ಎಕರೆ ಜಾಗವನ್ನು ಬೇರೆ ಕಡೆ ನೀಡುವ ಅಗತ್ಯವೇನಿದೆ ಎಂದು ಹಿಂದೂ ಮಹಾಸಭಾ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮುಸ್ಲಿಮರ ಆರು ಅರ್ಜಿಗಳು ಸೇರಿದಂತೆ ಇದು ಏಳನೇ ಮರು ಪರಿಶೀಲನಾ ಅರ್ಜಿಯಾಗಿದೆ.

ram mandir ayodhya web

ಐದು ಅರ್ಜಿಗಳನ್ನು ಮೌಲಾನಾ ಮುಫ್ತಿ ಹಸ್ಬುಲ್ಲಾ, ಮೌಲಾನಾ ಮಹಫೂಜೂರ್, ವಿಶ್ಬಾಹುದ್ದೀನ್, ಮೊಹಮ್ಮದ್ ಉಮರ್ ಹಾಗೂ ಹಾಜಿ ಹಬೂಬ್ ಎಂಬ ಐದು ಜನ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಬೆಂಬಲದಿಂದ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ಜಮಿಯತ್- ಉಲಮಾ-ಎ ಹಿಂದ್ 217 ಪುಟಗಳ ಮೇಲ್ಮನವಿ ಸಲ್ಲಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಜಮಿಯತ್-ಉಲಮಾ-ಎ ಹಿಂದ್ ಪರ ವಕೀಲರೊಬ್ಬರು, ಅಯೋಧ್ಯೆ ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ಯೋಚನೆ ಮಾಡಿದ್ದೇವೆ ಹಾಗೂ ಅರ್ಥ ಮಾಡಿಕೊಂಡಿದ್ದೇವೆ. ದೇಶದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದ್ದರು.

Ayodhya dispute

ಸುಪ್ರೀಂಕೋರ್ಟ್ ಬಾಬ್ರಿ ಮಸೀದಿಯ ನಾಶಕ್ಕೆ ಅವಕಾಶ ನೀಡಿದೆ. ಮುಸ್ಲಿಮರಿಗೆ 5 ಎಕರೆ ಜಾಗವನ್ನು ನೀಡುವ ನಿಟ್ಟಿನಲ್ಲಿ ಸಂವಿಧಾನದ 142 ವಿಧಿಯನ್ನು ತಪ್ಪಾಗಿ ಬಳಸಲಾಗಿದೆ. ಹೀಗೆ ಅನೇಕ ವಿಚಾರವಾಗಿ ಒಟ್ಟು 217 ಪುಟಗಳ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದರು.

Share This Article