ಅಯೋಧ್ಯೆ: ರಾಮಮಂದಿರದಲ್ಲಿ (Ram Mandir) ಬಾಲ ರಾಮನ ಪ್ರಾಣಪ್ರತಿಷ್ಠೆ (Prana Pratishta) ಆಗುವುದರ ಜೊತೆಗೆ ಆವರಣದಲ್ಲಿ 6 ದೇವರ ಗುಡಿಗಳು ಇರಲಿದೆ.
ಆವರಣದ 4 ಮೂಲೆಯಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ, ಮತ್ತು ಶಿವನ ಗುಡಿಗಳು ಇರಲಿದೆ. ಇಷ್ಟೇ ಅಲ್ಲದೇ ಉತ್ತರ ಭಾಗದಲ್ಲಿ ಅನ್ನಪೂರ್ಣ ಮತ್ತು ದಕ್ಷಿಣದಲ್ಲಿ ಹನುಮಂತನ ಗುಡಿ ಇರಲಿದೆ.
ಅಯೋಧ್ಯೆ ರಾಮಮಂದಿರ ಸಂಕೀರ್ಣದ ಒಳಗೆ, ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದ್ ರಾಜ್, ಮಾತಾ ಶಬರಿ ಮತ್ತು ದೇವಿ ಅಹಲ್ಯಾ ಗುಡಿಗಳಿರಲಿವೆ. ಬಾಲ ರಾಮನ ಮೂರ್ತಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿದ್ದರೆ ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ.
ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಮಂದಿರದಲ್ಲಿ ಪೂಜೆ-ಪುನಸ್ಕಾರಕ್ಕೆ ಅರ್ಚಕರ ಆಯ್ಕೆಯೂ ಆಗಿದೆ. ದೇಶಾದ್ಯಂತ ಆಯ್ಕೆಯಾದ 24 ಅರ್ಚಕರಲ್ಲಿ ಇಬ್ಬರು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಒಬ್ಬರು ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೇರಿದವರಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನದವರೆಗೆ ಯುಪಿ ಸರ್ಕಾರಿ ಬಸ್‌ಗಳಲ್ಲಿ ರಾಮ ಭಜನೆ ಪ್ರಸಾರ
ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಮಂದಿರ ನಿರ್ಮಾಣ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲು ಹೆಚ್ಚುವರಿ 500 ಕಾರ್ಮಿಕರನ್ನು ಕರೆತರಲಾಗಿದೆ.
ಜನವರಿ 22ರ ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ನಡುವಿನ 84 ಸೆಕೆಂಡ್‌ಗಳ ಅವಧಿಯನ್ನು ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ರಾಮಮಂದಿರದಲ್ಲಿ ರಾಮನ ಪ್ರತಿಷ್ಠಾಪನೆ ಮುಹೂರ್ತಕ್ಕೆ ಸಮಯ ಸೂಚಿಸುವಂತೆ ದೇಶಾದ್ಯಂತ ಇರುವ ವಿದ್ವಾಂಸರು ಹಾಗೂ ಪ್ರಖ್ಯಾತ ಜ್ಯೋತಿಷಿಗಳಲ್ಲಿ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿತ್ತು. ಎಲ್ಲರಿಂದ ಬಂದ ಮಾಹಿತಿಯನ್ನು ಸಮನ್ವಯಗೊಳಿಸಿ ಕೊನೆಗೆ ಮುಹೂರ್ತ ಸಮಯ ಅಂತಿಮಗೊಳಿಸಲಾಗಿದೆ. ಇದನ್ನೂ ಓದಿ: Ayodhya Ram Mandir: ಆನೆ, ಸಿಂಹ, ಹನುಮಾನ್, ಗರುಡ ಮೂರ್ತಿಗಳ ಫೋಟೋ ಬಿಡುಗಡೆ
ಕಾಶಿಯ ಜ್ಯೋತಿಷಿಯ ಮುಹೂರ್ತ ಆಯ್ಕೆ
ಕಾಶಿಯ ಜ್ಯೋತಿಷಿ ಪಂಡಿತ್ ಗಣೇಶ್ವರ್ ಶಾಸ್ತ್ರಿ ದ್ರಾವಿಡ ಅವರು 84 ಸೆಕೆಂಡ್ ಅವಧಿಯ ಮುಹೂರ್ತವನ್ನು ಸೂಚಿಸಿದ್ದರು. ಜನವರಿ 22ರಂದು ಮಧ್ಯಾಹ್ನ 12 ಗಂಟೆ 29 ನಿಮಿಷ 08 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್ ನಡುವಿನ 84 ಸೆಕೆಂಡ್ ಶುಭ ಮುಹೂರ್ತ ಎಂದು ಸೂಚಿಸಿದ್ದರು.
5 ದಿನಾಂಕಗಳು ಮುಂದಿತ್ತು!
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮನ ಮೂರ್ತಿ ಸ್ಥಾಪನೆಗೆ ದಿನಾಂಕಗಳನ್ನು ಸೂಚಿಸಿತ್ತು. ಇದಕ್ಕೆ ಉತ್ತರವಾಗಿ ದಿನಾಂಕಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಇದರಲ್ಲಿ ಜನವರಿ ತಿಂಗಳ 17ರಿಂದ 25ನೇ ತಾರೀಕಿನ ನಡುವೆ 5 ದಿನಾಂಕಗಳು ಇದ್ದವು. ಕೊನೆಗೆ ಪಂಡಿತ್ ಗಣೇಶ್ವರ್ ಶಾಸ್ತ್ರಿ ದ್ರಾವಿಡ ಅವರು ಜನವರಿ 22ರ ದಿನಾಂಕ ಹಾಗೂ ಪುಣ್ಯ ಮುಹೂರ್ತವನ್ನು ಆಯ್ಕೆ ಮಾಡಿದರು. ಜನವರಿ 22ರ ಮುಹೂರ್ತ ದೇಶಕ್ಕೆ ಸಂಜೀವಿನಿ ಯೋಗ ತರುತ್ತದೆ ಎಂದು ಗಣೇಶ್ವರ ಶಾಸ್ತ್ರಿ ಹೇಳಿದ್ದಾರೆ.