Connect with us

Latest

ಮಾಹಿತಿ ನೀಡದೇ ಅಯೋಧ್ಯೆ ಕೇಸ್‍ನಿಂದ ಮುಸ್ಲಿಂ ಪರ ವಕೀಲ ಧವನ್ ವಜಾ

Published

on

– ಉದ್ದೇಶಪೂರ್ವಕವಾಗಿ ತೆಗೆದು ಹಾಕಲಾಗಿದೆ
– ತಂಡದಿಂದ ತೆಗೆದು ಹಾಕಿದ್ದಕ್ಕೆ ಧವನ್ ಕೆಂಡಾಮಂಡಲ

ನವದೆಹಲಿ: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನ್ನಿ ವಕ್ಫ್ ಬೋರ್ಡ್ ಹಾಗೂ ಇತರ ಮುಸ್ಲಿಂ ಸಂಘಟನೆಗಳ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಕಾನೂನು ತಂಡದಿಂದ ವಜಾಗೊಳಿಸಿದೆ.

ಈ ಕುರಿತು ರಾಜೀವ್ ಧವನ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಎಓಆರ್(ಅಡ್ವಕೇಟ್ ಆನ್ ರೆಕಾರ್ಡ್) ಪ್ರಕಾರ ಬಾಬ್ರಿ ಮಸೀದಿ ಪ್ರಕರಣದ ವಾದ ಮಂಡನೆಯಿಂದ ನನ್ನನ್ನು ತೆಗದು ಹಾಕಲಾಗಿದೆ. ಜಮಿಯತ್ ಉಲೇಮಾ ಹಿಂದ್(ಜೆಯುಎಚ್) ಪರ ವಕೀಲ ಇಜಾಝ್ ಮಕ್ಬುಲ್ ನನ್ನನ್ನು ವಜಾಗೊಳಿಸಿದ್ದಾರೆ. ಮುನ್ಸೂಚನೆ ಇಲ್ಲದೆ ನನ್ನನ್ನು ತೆಗೆದು ಹಾಕಿದ್ದಕ್ಕೆ ಔಪಚಾರಿಕ ಪತ್ರವನ್ನು ನಾನು ಕಳುಹಿಸಿದ್ದೇನೆ. ಇನ್ನು ಮುಂದೆ ನಾನು ಪ್ರಕರಣದಲ್ಲಿ ನಾನು ವಾದ ಮಂಡಿಸುವುದಿಲ್ಲ ಧವನ್ ಹೇಳಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ನನ್ನನ್ನು ತೆಗೆಯಲಾಗಿದೆ ಎಂಬ ವಿಚಾರ ನನಗೆ ಗೊತ್ತಾಯಿತು. ಆದರೆ ಇದು ಸುಳ್ಳು. ಪ್ರಕರಣದಲ್ಲಿ ವಾದ ಮಾಡಲು ಯಾರನ್ನು ಸೇರಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಎಓಆರ್ ಅವರಿಗೆ ಇರುತ್ತದೆ. ಆದರೆ ಇಲ್ಲಿ ಉದ್ದೇಶಪೂರ್ವಕವಾಗಿ ಇಜಾಝ್ ಮಕ್ಬುಲ್ ಅವರ ಸೂಚನೆಯ ಮೇರೆಗೆ ನನ್ನನ್ನು ತೆಗೆದುಹಾಕಲಾಗಿದೆ ಎಂದು ಧವನ್ ಫೇಸ್‍ಬುಕ್‍ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಕೇಸ್ – 92 ವರ್ಷದ ‘ತರುಣ’ ವಕೀಲನ ಸಾಧನೆಗೆ ಪ್ರಶಂಸೆಯ ಸುರಿಮಳೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸೋಮವಾರ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ. ಜಮಿಯತ್- ಉಲಮಾ-ಎ ಹಿಂದ್ ಪರವಾಗಿ ಮೌಲಾನಾ ಸಯ್ಯದ್ ಅಶಾದ್ ರಶಿದಿ ಅವರು ಪರು ಮರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು, ಬಾಬ್ರಿ ಮಸೀದಿಯನ್ನು ನಿರ್ಮಿಸಲು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡುವ ಮೂಲಕ ಸಂಪೂರ್ಣ ನ್ಯಾಯ ಒದಗಿಸುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ. ಅಯೋಧ್ಯೆ ಪ್ರಕರಣದ ಕುರಿತು ಇದು ಮೊದಲ ಮರುಪರಿಶೀಲನಾ ಅರ್ಜಿಯಾಗಿದ್ದು, ಈ ಹಿಂದೆ ಸುನ್ನಿ ವಕ್ಫ್ ಮಂಡಳಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಅಯೋಧ್ಯೆ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ಜಮಿಯತ್- ಉಲಮಾ-ಎ ಹಿಂದ್ 217 ಪುಟಗಳ ಮೇಲ್ಮನವಿ ಸಲ್ಲಿಸಿದೆ.

ಸೋಮವಾರ ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಜಮಿಯತ್-ಉಲಮಾ-ಎ ಹಿಂದ್ ಪರ ವಕೀಲರೊಬ್ಬರು, ಅಯೋಧ್ಯೆ ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ಯೋಚನೆ ಮಾಡಿದ್ದೇವೆ ಹಾಗೂ ಅರ್ಥ ಮಾಡಿಕೊಂಡಿದ್ದೇವೆ. ದೇಶದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಮುಸ್ಲಿಂ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಬಾಬ್ರಿ ಮಸೀದಿಯ ನಾಶಕ್ಕೆ ಅವಕಾಶ ನೀಡಿದೆ. ಮುಸ್ಲಿಮರಿಗೆ 5 ಎಕರೆ ಜಾಗವನ್ನು ನೀಡುವ ನಿಟ್ಟಿನಲ್ಲಿ ಸಂವಿಧಾನದ 142 ವಿಧಿಯನ್ನು ತಪ್ಪಾಗಿ ಬಳಸಲಾಗಿದೆ. ಹೀಗೆ ಅನೇಕ ವಿಚಾರವಾಗಿ ಒಟ್ಟು 217 ಪುಟಗಳ ಮೇಲ್ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *