ಉಡುಪಿ: ಅಯೋಧ್ಯೆ ರಾಮಜನ್ಮಭೂಮಿ ತೀರ್ಪಿನ ನಂತರ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಪುರಿ ಶಂಕರಾಚಾರ್ಯ ಪೀಠ ನಿಶ್ಚಲಾನಂದ ಸ್ವಾಮೀಜಿ ಮೊತ್ತ ಮೊದಲಬಾರಿಗೆ ಭೇಟಿಯಾಗಿ ಬಿಸಿ ಬಿಸಿ ಚರ್ಚೆ ನಡೆಸಿದ್ದಾರೆ. ಉಡುಪಿ ಪೇಜಾವರ ಮಠದಲ್ಲಿ ಇಬ್ಬರ ಯತಿಗಳ ಮುಖಾಮುಖಿಯಾಗಿದೆ.
ಪುರಿ ಶ್ರೀ ನಿಶ್ಚಲಾನಂದ ಸ್ವಾಮೀಜಿ ಅಯೋಧ್ಯೆ ತೀರ್ಪಿನ ಬಗ್ಗೆ ಅಸಮಾಧಾನ ಹೊರ ಹಾಕಿದರು. ಅಯೋಧ್ಯೆಯಲ್ಲಿ ಮುಸ್ಲೀಮರಿಗೆ ಒಂದಿಂಚೂ ಭೂಮಿ ನೀಡಬಾರದು. ಅಯೋಧ್ಯೆಯನ್ನು ಮುಸಲ್ಮಾನರು ಮತ್ತೊಂದು ಮೆಕ್ಕಾ ಮಾಡಲು ತಯಾರಿ ನಡೆಸುತ್ತಾರೆ ನೋಡುತ್ತಿರಿ ಎಂದು ಪೇಜಾವರಶ್ರೀ ಮುಂದೆ ಕೋಪ ಹೊರಹಾಕಿದರು. ಸುಪ್ರೀಂ ಕೋರ್ಟಿಗಿಂತ ಪಾರ್ಲಿಮೆಂಟ್ ದೊಡ್ಡದು. ಪಾರ್ಲಿಮೆಂಟಲ್ಲಿ ಬಿಜೆಪಿಗೆ ಬಹುಮತ ಇದೆ. ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದು ಮಾಡಲಿ ಎಂದರು.
Advertisement
Advertisement
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣವಾಗದಂತೆ ಬಿಜೆಪಿ ಸರ್ಕಾರ ನೋಡಿಕೊಳ್ಳಬೇಕು ಎಂದು ಪುರಿ ಶ್ರೀಗಳು ತಾಕೀತು ಮಾಡಿದರು. ಧಾರ್ಮಿಕ ವಿಚಾರದಲ್ಲಿ ಸಂತರೇ ಸುಪ್ರೀಂ. ಸುಪ್ರೀಂ ಕೋರ್ಟ್ ಯಾಕೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿ ಸೆಕ್ಯೂಲರ್ ಸಂವಿಧಾನವನ್ನು ನಾನು ಒಪ್ಪೋದಿಲ್ಲ ಎಂದು ಗರಂ ಆಗಿ ನುಡಿದರು.
Advertisement
ರಾಮನಿಗೆ ಅಧಿಕಾರವಿಲ್ವಾ..?
ವಿಭಜಿತ ಭಾರತದಲ್ಲಿ ರಾಮ ಜನ್ಮಭೂಮಿಯ ಮೇಲಾದರೂ ನಮಗೆ ಪೂರ್ಣ ಅಧಿಕಾರ ಸಿಗಲಿ. ರಾಮ ಹುಟ್ಟಿದ ಭಾರತದಲ್ಲೇ ರಾಮಮಂದಿರಕ್ಕಾಗಿ ಇಷ್ಟು ವರ್ಷ ಕಾಯಬೇಕೇ? ನಮ್ಮ ಮಂದಿರಕ್ಕಾಗಿ ನಮ್ಮ ದೇಶದಲ್ಲಿ ಇಷ್ಟೊಂದು ಕ್ಲಿಷ್ಟಕರ ವಾತಾವರಣವೇ ಎಂದು ಅಸಮಾಧಾನ ವ್ಯಕ್ತ ಮಾಡಿದರು. ಇದು ಭಾರತವನ್ನು ಇನ್ನೊಂದು ಮೆಕ್ಕಾ ಮಾಡುವ ಷಡ್ಯಂತ್ರ. ನಮ್ಮ ಉದಾರತೆ ದೌರ್ಬಲ್ಯ ಆಗಬಾರದು ಎಂದು ಸಲಹೆ ನೀಡಿದರು.
Advertisement
ಬಿಜೆಪಿಗೆ ಚಾಟಿ
ಆಡಳಿತ ದುರಾಸೆ ಇಲ್ಲದ ಯಾವುದೇ ರಾಜಕೀಯ ಪಕ್ಷ ಈ ದೇಶದಲ್ಲಿ ಇಲ್ಲ ಎಂದು ಬಿಜೆಪಿಗೆ ಚಾಟಿ ಬೀಸಿ, ಮಹಾರಾಷ್ಟ್ರ, ಗೋವಾ, ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯ ಅಧಿಕಾರದ ಲಾಲಸೆಯ ಉದಾಹರಣೆ ನೀಡಿದರು. ಸಂತರು ಕೂಡಾ ರಾಜಕಾರಣಿಗಳನ್ನು ಅನುಸರಿಸುತ್ತರುವುದು ಶೋಚನೀಯ ಎಂದು ಮಠಾಧೀಶರ ರಾಜಕೀಯ ಆಸಕ್ತಿ ಬಗ್ಗೆ ಪ್ರಸ್ತಾಪಿಸಿ ವಿರೋಧಿಸಿದರು. ಅಯೋಧ್ಯೆಯಲ್ಲಿ ಒಂದಿಂಚು ಭೂಮಿ ಮುಸ್ಲಿಂರಿಗೆ ನೀಡೋದಕ್ಕೆ ನನ್ನ ಸಹಮತ ಇಲ್ಲ ಎಂದರು.
ಮುಸ್ಲಿಂ ನಾಯಕರಿಗೆ ರಾಷ್ಟ್ರದ ಉನ್ನತ ಹುದ್ದೆಗಳನ್ನು ನೀಡಿದ್ದೇವೆ. ರಾಷ್ಟ್ರಪತಿ, ಗೃಹ ಸಚಿವ, ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಪಟ್ಟ ಸಿಕ್ಕಿದೆ. ಅಯೋಧ್ಯೆಯ ಭೂಮಿಯನ್ನೂ ಕೊಟ್ಟಿರುವುದು ಎಷ್ಟು ಸರಿ ಎಂದು ಪೇಜಾವರ ಶ್ರೀಗಳನ್ನು ಪ್ರಶ್ನೆ ಮಾಡಿದರು. ಮಸೀದಿ ಅಲ್ಲಿ ಆಗಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳು ಹೇಳುತ್ತವೆ. ನಿಮ್ಮಂತಹಾ ವೀರ ಸಂತರು ಹಿಂದೂ ಧರ್ಮ ದುರ್ಬಲವಾಗದಂತೆ ನೊಡಿಕೊಳ್ಳಬೇಕು ಎಂದು ಪುರಿ ನಿಶ್ಚಲಾನಂದ ಶ್ರೀ ಕೋರಿಕೆ ವ್ಯಕ್ತಪಡಿಸಿದರು. ಸಮಾಲೋಚನೆ ಉದ್ದಕ್ಕೂ ಪೇಜಾವರಶ್ರೀ ಸಮಾನತೆ, ಸಂವಿಧಾನ ಸಹಬಾಳ್ವೆ ಮತ್ತು ಏಕತೆಯ ಮಂತ್ರ ಜಪಿಸಿದರೂ ಪುರಿಶ್ರೀ ಅದಕ್ಕೆ ಧನಿಗೂಡಿಸದೆ ತನ್ನದೇ ವಾದ ಮಂಡಿಸಿ ತೆರಳಿದರು.