ನವದೆಹಲಿ: ಆಯೋಧ್ಯೆ ರಾಮಮಂದಿರ ಭೂಮಿ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
2010ರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸಲ್ಲಿಸಿ ಪ್ರಶ್ನಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಪ್ರತ್ಯೇಕ ಪೀಠವನ್ನು ಸ್ಥಾಪಿಸುವಂತೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಆಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಸಂಬಂಧ ನ್ಯಾಯಾಲಯ ನೀಡುವ ತೀರ್ಪಿಗಿಂತಲೂ ಹೊರಗಡೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಮುಖ್ಯ ನ್ಯಾ.ಜಗದೀಶ್ ಸಿಂಗ್ ಖೇಹರ್, ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಸಂಜಯ್ ಕಿಶನ್ ಕೌಲ್ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.
Advertisement
ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಸೂಕ್ಷ್ಮ ಮತ್ತು ಭಾವನಾತ್ಮಕ ವಿಚಾರವಾಗಿರುವುದರಿಂದ ಎರಡೂ ಪಂಗಡದ ನಾಯಕರು ಸಭೆ ನಡೆಸಿ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಕೋರ್ಟ್ ಸೂಚಿಸಿದೆ.
Advertisement
ಈ ಪ್ರಕರಣದ ಸಮಸ್ಯೆ ಬಗೆ ಹರಿಸಲು ನೀವು ಯಾರನ್ನು ಬೇಕಾದರು ಆರಿಸಿಕೊಳ್ಳಬಹುದು. ನಾನು ಮಧ್ಯಸ್ಥಿಕೆ ವಹಿಸಬೇಕು ಎಂದು ನೀವು ಬಯಸಿದ್ದಲ್ಲಿ ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ. ನಿಮಗೆ ಬೇರೆ ನ್ಯಾಯಾಧೀಶರು ಬೇಕಾದರೆ ಅವರನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಎಂದು ಮುಖ್ಯ, ನ್ಯಾ. ಖೇಹರ್ ದೂರುದಾರ ಸುಬ್ರಮಣಿಯನ್ ಸ್ವಾಮಿ ಅವರಿಗೆ ತಿಳಿಸಿದರು.
Advertisement
ಎರಡು ಪಂಗಡದ ನಾಯಕರ ಜೊತೆ ಮಾತುಕತೆ ನಡೆಸಿ ಮಾರ್ಚ್ 31ರಂದು ನಿರ್ಧಾರವನ್ನು ತಿಳಿಸುವಂತೆ ಕೋರ್ಟ್ ಸುಬ್ರಮಣಿಯನ್ ಸ್ವಾಮಿ ಅವರಿಗೆ ಸೂಚಿಸಿದೆ.
Advertisement
ಕೋರ್ಟ್ ಹೊರಗಡೆ ಎರಡೂ ಪಂಗಡಗಳು ಮಾತುಕತಡೆ ನಡೆಸಿ ಈ ವಿಚಾರವನ್ನು ಬಗೆಹರಿಸಿಕೊಳ್ಳುವುದು ಬಹಳ ಕಷ್ಟ. ಈ ಪ್ರಕರಣ ನ್ಯಾಯಾಲಯದಲ್ಲೇ ಇತ್ಯರ್ಥವಾಗಬೇಕಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ನ್ಯಾಯಾಲಯದ ಹೊರಗಡೆ ವಿವಾದವನ್ನು ಬಗೆಹರಿಸಿಕೊಳ್ಳಿ ಎನ್ನುವ ಸುಪ್ರೀಂ ಅಭಿಪ್ರಾಯವನ್ನು ಪ್ರಕರಣದ ದೂರುದಾರ ವಕ್ಫ್ ಬೋರ್ಡ್‍ನ ಜಿಲಾನಿ ತಿರಸ್ಕರಿಸಿದ್ದಾರೆ.