ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ (Ayodhya) ಭವ್ಯ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ (Ram Mandir’s Prana Pratishtha ) ನಡೆಯಲಿದೆ. ಆದರೆ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿ ಯಾವುದು ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ. ಈ ಕುತೂಹಲದ ಪ್ರಶ್ನೆಗೆ ಸಣ್ಣದೊಂದು ಸುಳಿವು ಸಿಕ್ಕಿದೆ.. ಈ ಸುಳಿವು ನಿಜವಾದರೆ ಕರ್ನಾಟಕ (Karnataka) ಪಾಲಿಗೆ ಮಂದಿರಾದ ಖುಷಿ ದುಪ್ಪಟ್ಟಾಗಲಿದೆ.
ಈಗಾಗಲೇ ಪ್ರತಿಷ್ಠಾಪನೆಗೆ ಮೂರು ಮೂರ್ತಿಗಳು ಸಿದ್ಧಗೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ (Shri Ram Janmabhoomi Teerth Kshetra) ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ಒಟ್ಟು ಮೂರು ಮೂರ್ತಿಗಳನ್ನು ಕೆತ್ತಿಸಿದೆ. ಸಮಯ ಅಭಾವ, ಶಿಲ್ಪಿಗಳಗೆ ಸಮಸ್ಯೆಯಾದರೆ ಅದು ಉದ್ಘಾಟನೆ ಕಾರ್ಯಕ್ರಮಕ್ಕೆ ತೊಂದರೆಯಾಗಬಾರದು ಮತ್ತು ಅತ್ಯುತ್ತಮ ಮೂರ್ತಿಗಾಗಿ ಮೂವರು ಶಿಲ್ಪಿಗಳಿಂದ ಬಾಲರಾಮನ (Balarama) ಕೆತ್ತಿಸಲಾಗಿತ್ತು. ಇವುಗಳಲ್ಲಿ ಬೆಂಗಳೂರಿನ ಜಿಎಲ್ ಭಟ್, ಮೈಸೂರಿನ ಅರುಣ್ ಯೋಗಿರಾಜ್ (Arun Yogiraj) ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಮೂರ್ತಿ ಕೆತ್ತಿ ಹಸ್ತಾಂತರ ಮಾಡಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಭಕ್ತರಿಗೆ ಮಾತ್ರ ಅಯೋಧ್ಯೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು
ಈಗಾಗಲೇ ಹಸ್ತಾಂತವಾಗಿರುವ ಮೂರ್ತಿಗಳ ಪೈಕಿ ಒಂದನ್ನು ಆಯ್ಕೆ ಮಾಡಲು ಟ್ರಸ್ಟ್ ಒಂದು ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ಮೂರು ಮೂರ್ತಿಗಳ ಕೆತ್ತನೆಗೆ ಗುಣಮಟ್ಟ, ರಾಮನ ಬಾಲ್ಯದ ನೋಟ, ದೈವತ್ವ ಭಾವವನ್ನು ಪರಿಶೀಲಿಸಿ ಮೈಸೂರಿನ ಅರುಣ್ ಯೋಗಿರಾಜ್ ಕರ್ನಾಟಕದ ಕೃಷ್ಣ ಶಿಲೆಯಲ್ಲಿ ಕೆತ್ತಿದ ಮೂರ್ತಿಯನ್ನು ಅಂತಿಮಗೊಳಸಿದ್ದಾರೆ ಎನ್ನಲಾಗಿದೆ. ಕೇದಾರನಾಥದಲ್ಲಿರುವ ಆದಿ ಶಂಕರಾಚಾರ್ಯರ ವಿಗ್ರಹ, ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಕೆತ್ತಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ಭೇಷ್ ಎನ್ನಿಸಿಕೊಂಡಿದ್ದ ಅರುಣ್ ಯೋಗಿರಾಜ್ ಅವರ ರಾಮಲಲ್ಲಾ ಮೂರ್ತಿಯ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಕೆಲವೇ ದಿನಗಳಲ್ಲಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಪ್ರತಿಷ್ಠಾಪನೆಗೊಳ್ಳಲಿರುವ ಮೂರ್ತಿಯ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದು ಒಂದು ವೇಳೆ ಕರ್ನಾಟಕ ಮೂಲದ ಮೂರ್ತಿ ಆಯ್ಕೆಯಾದರೆ ಇದು ರಾಜ್ಯದ ರಾಮ ಭಕ್ತರ ಸಂತಸವನ್ನು ನೂರ್ಮಡಿ ಮಾಡಲಿದೆ.
ರಾಮಲಲ್ಲಾ ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಕಲ್ಲು ಬಳಕೆ ಮಾಡಲಾಗಿದೆ .