ಅಯೋಧ್ಯೆ ತೀರ್ಪಿಗಾಗಿ ದೇಶಾದ್ಯಂತ ಕಟ್ಟೆಚ್ಚರ

Public TV
2 Min Read
AYODHYA SUPREME

– ಸಚಿವರಿಗೆ ಸ್ವಕ್ಷೇತ್ರದ ಶಾಂತಿ ಹೊಣೆ ಹೊರಿಸಿದ ಮೋದಿ
– ಬೆಂಗಳೂರಿಗೆ ಹೆಚ್ಚುವರಿ ಸಿಆರ್‌ಪಿಎಫ್ ಕೋರಿಕೆ
– ವಿವಾದಾತ್ಮಕ ಹೇಳಿಕೆ ನೀಡದಂತೆ ಜನಪ್ರತಿನಿಧಿಗಳಿಗೆ ಸೂಚನೆ

ನವದೆಹಲಿ: ಅಯೋಧ್ಯೆ ಪ್ರಕರಣದ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲು ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಅಯೋಧ್ಯೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಈಗಾಗಲೇ 144 ಸೆಕ್ಷನ್ ಜಾರಿ ಮಾಡಲಾಗಿದೆ. 4000 ಹೆಚ್ಚುವರಿ ಅರೆಸೇನಾಪಡೆ ರವಾನಿಸಲಾಗಿದೆ. ಅಲ್ಲದೆ ಸಿಆರ್‌ಪಿಎಫ್, ಕಮಾಂಡೋ ಪಡೆಗಳನ್ನು ಸಹ ನಿಯೋಜಿಸಲಾಗಿದೆ. ಅಂಬೇಡ್ಕರ್ ನಗರದ(ಅಕ್ಬರ್‌ಪುರ್, ಟಾನ್ ಡಾ. ಜಲಾಲ್‌ಪುರ್, ಜೈಟ್ ಪುರ್, ಭಿಟಿ ಮತ್ತು ಅಲ್ಲಾಪುರ್) ವಿವಿಧ ಕಾಲೇಜುಗಳಲ್ಲಿ 8 ತಾತ್ಕಾಲಿಕ ಜೈಲುಗಳನ್ನು ಸ್ಥಾಪನೆ ಮಾಡಲಾಗಿದೆ. ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಕಾಲೇಜುಗಳಿಗೆ ಸೂಚಿಸಲಾಗಿದೆ.

ಕಾನೂನು-ಸುವ್ಯವಸ್ಥೆ ಕಾಪಾಡಿ, ಸೂಕ್ಷ್ಮ  ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಿ ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ಸಂದೇಶ ರವಾನಿಸಿದೆ. ಮುಂಬೈನಲ್ಲೂ ಹದ್ದಿನ ಕಣ್ಣಿಡಲಾಗಿದ್ದು, ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರು ಪತ್ರಕರ್ತರ ಜೊತೆ ಕಮೀಷನರ್ ಸಂಜಯ್ ಬಾರ್ವೆ ಸಮಾಲೋಚನೆ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಯಾವುದೇ ಹಿಂಸಾಚಾರ, ಕಾನೂನು ಸುವ್ಯವಸ್ಥೆ ಹದಗೆಡದಂತೆ ಮುಂಜಾಗ್ರತಾ ಕ್ರಮವಾಗಿ ಅಯೋಧ್ಯೆ ಸೇರಿದಂತೆ ರಾಜ್ಯಾದ್ಯಂತ ಉತ್ತರಪ್ರದೇಶ ಸರ್ಕಾರ ಭಾರೀ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಇದೇ 17ಕ್ಕೆ ನಿವೃತ್ತಿಯಾಗಲಿದ್ದಾರೆ. ತೀರ್ಪು ಪ್ರಕಟಣೆಗೆ ಕ್ಷಣಗಣನೆ ಆರಂಭವಾದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.

ತನ್ನೆಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿರುವ ಆರ್‌ಎಸ್‌ಎಸ್, ಅಯೋಧ್ಯೆ ತೀರ್ಪಿನತ್ತ ಗಮನ ಕೇಂದ್ರೀಕರಿಸಿದೆ. ತನ್ನೆಲ್ಲಾ ಕಾರ್ಯಕರ್ತರಿಗೆ ಎಚ್ಚರಿಕೆ ಹಾಗೂ ಶಾಂತಚಿತ್ತದಿಂದ ಇರುವಂತೆ ಸೂಚಿಸಿದೆ.

ಇತ್ತ ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ, ಟಿಎಂಸಿ, ಆರ್‌ಜೆಡಿ ಹಾಗೂ ಎಡ ಪಕ್ಷಗಳಲ್ಲಿರುವ ಮುಸ್ಲಿಂ ಸಂಸದರ ಜೊತೆ ಸಭೆ ನಡೆಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಹಾಗೂ ಯಾವುದೇ ಪ್ರಚೋದನೆ ನೀಡದಂತೆ ಸಂಸದರಲ್ಲಿ ಮನವಿ ಮಾಡಿದೆ. ನಿನ್ನೆ ಅಹ್ಮದ್ ಪಟೇಲ್ ಜೊತೆ ಗಡ್ಕರಿ ಅವರ ಭೇಟಿಯೂ ಇದರ ಭಾಗ ಎಂದು ಆರ್‌ಎಸ್‌ಎಸ್ ಹೇಳಿದೆ.

ಈ ಮಧ್ಯೆ, ಪ್ರಧಾನಿ ಮೋದಿ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಶಾಂತವಾಗಿ ವರ್ತಿಸುವಂತೆ ಸಲಹೆ ನೀಡಿದ್ದಾರೆ. ದೇಶದಲ್ಲಿ ಸೌಹಾರ್ದತೆ- ಸಾಮರಸ್ಯದ ಕಾಪಾಡುವ ಅಗತ್ಯವಿದೆ. ಅಯೋಧ್ಯೆ ವಿವಾದ ಸಂಬಂಧ ಅನಗತ್ಯ ಹೇಳಿಕೆಗಳನ್ನು ನೀಡಿದಿರಿ, ಕೋರ್ಟ್ ತೀರ್ಪನ್ನು ಸೋಲು, ಗೆಲುವು ಎಂದು ನೋಡಬೇಡಿ. ಶಾಂತಿ ಕಾಪಾಡುವ ಸಲುವಾಗಿ ನಿಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲೂ ಹೈ ಅಲರ್ಟ್: ಬೆಂಗಳೂರಿನಲ್ಲೂ ಸೇನೆ ನಿಯೋಜನೆ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.

bsy

ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಣೆಯಾಗಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ್ದು, ಅಯೋಧ್ಯೆ ತೀರ್ಪು ಹಿನ್ನೆಲೆ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿಲ್ಲ. ಅಯೋಧ್ಯೆ ತೀರ್ಪಿಗೂ, ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಯೋಧ್ಯೆ ತೀರ್ಪು ಪರ-ವಿರೋಧ ಏನೇ ಬಂದರೂ ಸ್ವೀಕರಿಸಬೇಕು, ಇದರಿಂದ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆ ಇಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *