ಹನುಮನನ್ನು ಲಗ್ನ ಪತ್ರಿಕೆಯಲ್ಲಿ ಮುದ್ರಿಸಿ ಭಕ್ತಿ ಮೆರೆದ ಅಯೋಧ್ಯೆಯ ಮುಸ್ಲಿಂ ಕುಟುಂಬ

Public TV
2 Min Read
hanuman

ಲಕ್ನೋ: ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತಿದೆ. ಇದಕ್ಕೆ ಅಯೋಧ್ಯೆಯ ಮುಸ್ಲಿಂ ಕುಟುಂಬವೊಂದು ಸಾಕ್ಷಿಯಾಗಿದೆ. ತಮ್ಮ ಮಗ, ಮಗಳ ಮದುವೆ ಆಮಂತ್ರಣ ಪ್ರತಿಕೆಯಲ್ಲಿ ರಾಮನ ಭಂಟ ಹನುಮನ ಚಿತ್ರವನ್ನು ಮುದ್ರಿಸಿ ಕುಟುಂಬ ಭಕ್ತಿ ಮೆರೆದಿದೆ.

ಹೌದು. ಉತ್ತರ ಪ್ರದೇಶ ಚಾರೇರ ಗ್ರಾಮದ ಮುಸ್ಲಿಂ ಕುಟುಂಬ ಶ್ರೀರಾಮನ ಬಂಟ ಹನುಮನ ಚಿತ್ರವುಳ್ಳ ಕ್ಯಾಲೆಂಡರ್ ಒಂದನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆ. ಅಷ್ಟೇ ಅಲ್ಲದೆ ಈ ಪತ್ರಿಕೆಯಲ್ಲಿ ಬ್ರಹ್ಮ, ವಿಷ್ಣು, ಶಿವ ಹಾಗೂ ನಾರದರ ಚಿತ್ರವನ್ನೂ ಕೂಡ ಕುಟುಂಬ ಮುದ್ರಿಸಿದೆ. ರಸೂಲಾಬಾದ್‍ನ ಹೋಮಿಯೋಪತಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೊಹಮ್ಮದ್ ಮುಬೀನ್ ಅವರು ತಮ್ಮ ಮಗ ಮತ್ತು ಮಗಳು ಲಗ್ನ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ ಮುದ್ರಿಸಿದ್ದಾರೆ. ಮುಬೀನ್ ಅವರ ಮಗ ಮೊಹಮದ್ ನಸೀರ್ ಹಾಗೂ ಮಗಳು ಅಮೀನಾ ಬಾನೋ ಅವರ ಮದುವೆ ನಡೆಯಲಿದೆ. ಶುಕ್ರವಾರ ನಸೀರ್ ಮದುವೆಯಾದರೆ, ರವಿವಾರದಂದು ಅಮೀನಾ ಮದುವೆ ನಡೆಯಲಿದೆ. ಹೀಗಾಗಿ ಮುಬೀನ್ ಅವರು ತಮ್ಮ ಮಕ್ಕಳ ಮದುವೆಗೆ ಹಿಂದೂ ದೇವರುಗಳುಳ್ಳ ವಿಶೇಷ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ.

love marriage

ಈ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬ, ನಮ್ಮ ಅಲ್ಲಾಹುವಿನ ಮೇಲೆ ನಮಗೆ ಎಷ್ಟು ನಂಬಿಕೆ ಇದೆಯೋ ಅಷ್ಟೇ ನಂಬಿಕೆ ಹಿಂದೂ ದೇವ, ದೇವತೆಯರ ಮೇಲಿದೆ ಎಂದು ಹೇಳಿ ಎಲ್ಲರ ಮನ ಗೆದ್ದಿದ್ದಾರೆ.

ಮುಬೀನ್ ಅವರು ಈ ಬಗ್ಗೆ ಮಾತನಾಡಿ, ಲಗ್ನ ಪತ್ರಿಕೆ ಮುದ್ರಿಸುವ ವಿಚಾರದಲ್ಲಿ ಯಾರೂ ನನ್ನ ಮೇಲೆ ಒತ್ತಡ ಹೇರಿರಲಿಲ್ಲ. ಕುಟುಂಬ ಸದಸ್ಯರ ಅನುಮತಿ, ಅಭಿಪ್ರಾಯ ಪಡೆದು ನಾನು ಪತ್ರಿಕೆ ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ.

marriage 2

ಈಗಾಗಲೇ 700 ಮಂದಿಗೆ ಲಗ್ನ ಪತ್ರಿಕೆ ಹಂಚಿದ್ದೇನೆ. ಹಿಂದೂ ಮಿತ್ರರಿಗೂ ಲಗ್ನ ಪತ್ರಿಕೆ ಹಂಚಿ ಮದುವೆಗೆ ಕರೆದಿದ್ದೇನೆ. ಯಾರೂ ಕೂಡ ಈವರೆಗೆ ಇದಕ್ಕೆ ವಿರೋಧಿಸಿಲ್ಲ. ನನ್ನ ಸಂಬಂಧಿಕರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಮಕ್ಕಳು ಕೂಡ ಖುಷಿಯಿಂದ ಲಗ್ನ ಪತ್ರಿಕೆಯನ್ನು ಒಪ್ಪಿದ್ದಾರೆ. ಎಲ್ಲರೂ ಇದು ಒಳ್ಳೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಖುಷಿಯಿಂದ ಮುಬೀನ್ ಹೇಳಿದ್ದಾರೆ.

ಹಿಂದೂಗಳು ಮತ್ತು ಮುಸ್ಲಿಮರು ಯಾವಾಗಲೂ ಇಲ್ಲಿ ಪರಿಪೂರ್ಣ ಸಾಮರಸ್ಯದಿಂದ ವಾಸಿಸುತ್ತಿದ್ದಾರೆ. ಈ ಸಾಮರಸ್ಯ ಎರಡು ಸಮುದಾಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸಿದೆ ಎಂದು ಸ್ಥಳೀಯರೊಬ್ಬರು ಮುಬೀನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article