LatestNational

ಅಯೋಧ್ಯೆ ರಾಮಮಂದಿರ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಲು ನಾವು ಸಿದ್ಧ:ಎಐಎಂಪಿಎಲ್‍ಬಿ

ಲಕ್ನೋ: ಆಯೋಧ್ಯೆ ರಾಮಮಂದಿರ- ಬಾಬ್ರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‍ಬಿ) ಹೇಳಿದೆ.

ನಾವು ಸುಪ್ರೀಂ ಕೋರ್ಟ್ ಸಲಹೆಯನ್ನು ಸ್ವಾಗತಿಸಿದ್ದು, ಕೋರ್ಟ್ ಹೊರಗಡೆ ವಿವಾದವನ್ನು ಬಗೆ ಹರಿಸಲು ಸಿದ್ಧರಿದ್ದೇವೆ ಎಂದು ಎಐಎಂಪಿಎಲ್‍ಬಿಯ ಮೌಲನಾ ಖಲೀದ್ ರಶೀದ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ಸುಪ್ರೀಂ ಸಲಹೆಯನ್ನು ಆರ್‍ಎಸ್‍ಎಸ್ ಸ್ವಾಗತಿಸಿತ್ತು. ಆದರೆ ವಕ್ಫ್ ಬೋರ್ಡ್ ಸುಪ್ರೀಂ ಸಲಹೆಯನ್ನು ತಿರಸ್ಕರಿಸಿತ್ತು.

ನ್ಯಾಯಾಲಯದ ಹೊರಗಡೆ ಈ ವಿವಾದವನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯ ವ್ಯಾಪ್ತಿಯಲ್ಲೇ ಈ ವಿವಾದ ಪರಿಹಾರವಾಗಬೇಕು ಎಂದು ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿ(ಬಿಎಂಎಸಿ) ಸಮನ್ವಯಕಾರ ಜಿಲಾನಿ ತಿಳಿಸಿದ್ದಾರೆ.

2010ರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸಲ್ಲಿಸಿ ಪ್ರಶ್ನಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಪ್ರತ್ಯೇಕ ಪೀಠವನ್ನು ಸ್ಥಾಪಿಸುವಂತೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಂಗಳವಾರ ಸುಪ್ರೀಂ ನಲ್ಲಿ ನಡೆಯಿತು. ಈ ವೇಳೆ ಆಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಸಂಬಂಧ ನ್ಯಾಯಾಲಯ ನೀಡುವ ತೀರ್ಪಿಗಿಂತಲೂ ಹೊರಗಡೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಮುಖ್ಯ ನ್ಯಾ.ಜಗದೀಶ್ ಸಿಂಗ್ ಖೇಹರ್, ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಸಂಜಯ್ ಕಿಶನ್ ಕೌಲ್ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿತ್ತು,

ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಸೂಕ್ಷ್ಮ ಮತ್ತು ಭಾವನಾತ್ಮಕ ವಿಚಾರವಾಗಿರುವುದರಿಂದ ಎರಡೂ ಪಂಗಡದ ನಾಯಕರು ಸಭೆ ನಡೆಸಿ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಕೋರ್ಟ್ ಸಲಹೆ ನೀಡಿತ್ತು.

Leave a Reply

Your email address will not be published. Required fields are marked *

Back to top button