ಅಯೋಧ್ಯೆ ಕೇಸ್ – ಸುಪ್ರೀಂನಲ್ಲಿ ಹೈಡ್ರಾಮಾ, ದಾಖಲೆ ಹರಿದ ಮುಸ್ಲಿಂ ಪರ ವಕೀಲ

Public TV
2 Min Read
Supreme Court of India

ನವದೆಹಲಿ: ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠದ ಮುಂದೆ ಇಂದು ಬೆಳಗ್ಗೆ ಹೈಡ್ರಾಮಾ ನಡೆದಿದ್ದು ಹಿರಿಯ ವಕೀಲ ರಾಜೀವ್ ಧವನ್ ದಾಖಲೆಗಳನ್ನು ಹರಿದು ಹಾಕಿದ್ದಾರೆ.

ಅಯೋಧ್ಯೆ ಪ್ರಕರಣದ ವಿಚಾರಣೆಯ ಕಡೆಯ ದಿನವಾದ ಇಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯುತಿತ್ತು.

ಈ ಸಂದರ್ಭದಲ್ಲಿ ಹಿಂದೂ ಮಹಾಸಭಾ ಪರ ವಕೀಲ ವಿಕಾಸ್ ಸಿಂಗ್ ಮಾಜಿ ಐಪಿಎಸ್ ಅಧಿಕಾರಿ ಕಿಶೋರ್ ಕುನಾಲ್ ಬರೆದ ‘ಅಯೋಧ್ಯೆ ರಿವಿಸಿಟೆಡ್’ ಪುಸ್ತಕವನ್ನು ಉಲ್ಲೇಖಿಸಿ ಆಯೋಧ್ಯೆಯಲ್ಲಿ ರಾಮಮಂದಿರ ಅಸ್ತಿತ್ವದಲ್ಲಿ ಇತ್ತು ಎನ್ನುವುದಕ್ಕೆ ಈ ಪುಸ್ತಕ ಮತ್ತಷ್ಟು ಮಾಹಿತಿ ನೀಡುತ್ತದೆ ಎಂದು ಕೋರ್ಟ್ ಗಮನಕ್ಕೆ ತಂದರು.

ಪುಸ್ತಕದ ಬಗ್ಗೆ ಉಲ್ಲೇಖಿಸುತ್ತಿದ್ದಂತೆ ಸುನ್ನಿ ವಕ್ಫ್ ಬೋರ್ಡ್ ಪರ ವಕೀಲ ರಾಜೀವ್ ಧವನ್ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯ ನ್ಯಾ. ರಂಜನ್ ಗೊಗೋಯ್ ಈ ಪುಸ್ತಕವನ್ನು ನಾನು ಇಟ್ಟುಕೊಳ್ಳಬಹುದೇ ಎಂದು ಕೇಳಿದ್ದಕ್ಕೆ ವಿಕಾಸ್ ಸಿಂಗ್ ಇಟ್ಟುಕೊಳ್ಳಬಹುದು ಎಂದು ತಿಳಿಸಿದರು. ನಂತರ ಮುಖ್ಯ ನ್ಯಾಯಾಧೀಶರು ಈಗ ನಾನು ಈ ಪುಸ್ತಕವನ್ನು ಓದಲು ಆರಂಭಿಸುತ್ತೇನೆ. ನವೆಂಬರ್ ನಲ್ಲೂ ಓದುತ್ತೇನೆ. ಆ ಬಳಿಕವೂ ಓದುತ್ತೇನೆ ಎಂದು ತಿಳಿಸಿದರು.

ನ್ಯಾ.ಗೊಗೋಯ್ ಅವರು ಪುಸ್ತಕವನ್ನು ಓದುತ್ತೇನೆ ಎಂಬ ಮಾತು ಬರುತ್ತಿದ್ದಂತೆ ವಕೀಲ ರಾಜೀವ್ ಧವನ್ ಸಿಟ್ಟಾದರು. ವಿಚಾರಣೆ ಸಮಯದಲ್ಲಿ ಹಿಂದೂ ಮಹಾಸಭಾ ನೀಡಿದ ನಕ್ಷೆ ಮತ್ತು ದಾಖಲೆಗಳನ್ನು ಹರಿದು ಹಾಕಿದರು. ಇದಕ್ಕೆ ಸಿಟ್ಟಾದ ಗೊಗೋಯ್ ಇನ್ನಷ್ಟು ದಾಖಲೆಗಳನ್ನು ಹರಿಯಬಹುದು ಎಂದಾಗ ಧವನ್ ಮತ್ತಷ್ಟು ದಾಖಲೆಗಳನ್ನು ಹರಿದು ಹಾಕಿದರು.

rajeev dhavan

ಕೂಡಲೇ ಧವನ್ ಅವರಿಗೆ ಎಚ್ಚರಿಕೆ ಕೊಟ್ಟ ಗೊಗೋಯ್ ಈ ರೀತಿಯ ವರ್ತನೆ ಮಾಡಕೂಡದು. ನೀವು ಈ ರೀತಿ ಮಾಡಿದರೂ ನಾವು ಎಲ್ಲ ದಾಖಲೆಗಳನ್ನು ಅಧ್ಯಯನ ಮಾಡುತ್ತೇವೆ ಎಂದು ಎಲ್ಲ ಕಕ್ಷಿದಾರರ ಪರ ವಕೀಲರಿಗೆ ಸೂಚಿಸಿದರು.

2010ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾ. ರಂಜನ್ ಗೊಗೋಯ್, ಎಸ್‍ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್‍ಎ ನಾಜೀರ್ ನೇತೃತ್ವದ ಸಂವಿಧಾನ ಪೀಠ ಆಗಸ್ಟ್ 6 ರಿಂದ ದಿನಂಪ್ರತಿ ವಿಚಾರಣೆ ನಡೆಸುತ್ತಿದೆ. ಇಂದು ಅಂತಿಮ ದಿನವಾಗಿದ್ದು, ಇಂದಿನ ವಿಚಾರಣೆ ಸಮಯದಲ್ಲಿ ರಂಜನ್ ಗೊಗೋಯ್ ಸಂಜೆ 5 ಗಂಟೆಯ ಒಳಗಡೆ ಎಲ್ಲರ ವಾದ ಅಂತ್ಯವಾಗಬೇಕು ಎಂದು ಸೂಚಿಸಿದ್ದಾರೆ.

rama mandir supreme court

2018ರ ಅಕ್ಟೋಬರ್ 3 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ರಂಜನ್ ಗೊಗೋಯ್ ಅವರ ಅವಧಿ ಈ ವರ್ಷ ನವೆಂಬರ್ 17ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಗೊಗೋಯ್ ಅವರು ನಿವೃತ್ತರಾಗುವುದಕ್ಕೂ ಮೊದಲೇ ಅಯೋಧ್ಯೆ ತೀರ್ಪು ಪ್ರಕಟವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *