– ಎರಡು ವಾರಗಳಲ್ಲಿ 250 ಸೂರ್ಯೋದಯ ಕಂಡ ‘ಆಕ್ಸಿಯಮ್ -4’ ಗಗನಯಾತ್ರಿಗಳು
ನವದೆಹಲಿ: ಎರಡು ವಾರಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಮಯ ಕಳೆದ ನಂತರ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮುಂದಿನ ವಾರ ಭೂಮಿಗೆ ಮರಳಲಿದ್ದಾರೆ. ಆಕ್ಸಿಯಮ್ -4 (ಆಕ್ಸ್ -4) ಮಿಷನ್ ಗಗನಯಾತ್ರಿಗಳು ಜುಲೈ 14 ರಂದು ಐಎಸ್‌ಎಸ್‌ನಿಂದ ಹಿಂತಿರುಗಲಿದ್ದಾರೆ ಎಂದು ನಾಸಾ ಗುರುವಾರ ಪ್ರಕಟಿಸಿದೆ.
ನಾವು ಸ್ಟೇಷನ್ ಪ್ರೋಗ್ರಾಂನೊಂದಿಗೆ ಕೆಲಸ ಮಾಡುತ್ತಿದ್ದೇವೆ. ಆಕ್ಸಿಯಮ್ -4 ಪ್ರಗತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ನಾವು ಆ ಕಾರ್ಯಾಚರಣೆಯನ್ನು ಅನ್‌ಡಾಕ್ ಮಾಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ಅನ್‌ಡಾಕ್ ಮಾಡುವ ಟಾರ್ಗೆಟ್ ಜುಲೈ 14 ಆಗಿದೆ ಎಂದು ನಾಸಾ ಕಮರ್ಷಿಯಲ್ ಕ್ರೂ ಪ್ರೋಗ್ರಾಂನ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್-4 ಮಿಷನ್ ಉಡಾವಣೆಗೊಂಡಿತು. 28 ಗಂಟೆಗಳ ಪ್ರಯಾಣದ ನಂತರ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಮರುದಿನ ಬಾಹ್ಯಾಕಾಶ ನಿಲ್ದಾಣ ತಲುಪಿತು.
ಶುಭಾಂಶು ಶುಕ್ಲಾ, ಪೆಗ್ಗಿ ವಿಟ್ಸನ್, ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಟಿಬೋರ್ ಕಾಪು ಅವರನ್ನೊಳಗೊಂಡ ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 230 ಸೂರ್ಯೋದಯಗಳನ್ನು ಕಂಡಿದ್ದಾರೆ. ಕಕ್ಷೆಯ ಪ್ರಯೋಗಾಲಯದಲ್ಲಿ ಎರಡು ವಾರಗಳ ಕೊನೆಯಲ್ಲಿ ಬಾಹ್ಯಾಕಾಶದಲ್ಲಿ ಸುಮಾರು 100 ಲಕ್ಷ ಕಿ.ಮೀ. ಪ್ರಯಾಣಿಸಿದ್ದಾರೆ.
ಭೂಮಿಯಿಂದ ಸುಮಾರು 250 ಮೈಲುಗಳಷ್ಟು ಎತ್ತರದಲ್ಲಿರುವ ಗಗನಯಾತ್ರಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯುವುದು, ಭೂಮಿಯ ನೋಟವನ್ನು ವೀಕ್ಷಿಸುವುದು ಮತ್ತು ಪ್ರೀತಿಪಾತ್ರರನ್ನು ಸಂಪರ್ಕಿಸಿ ಸಮಯ ಕಳೆಯುವ ಕೆಲಸ ಮಾಡಿದ್ದಾರೆಂದು ಆಕ್ಸಿಯಮ್ ಸ್ಪೇಸ್ ಹೇಳಿಕೆ ಗುರುವಾರ ತಿಳಿಸಿದೆ.