ಉಡುಪಿ: ಎಲ್ಲಿ ನೋಡಿದರೂ ಕೊರೊನಾ ವೈರಸಿದ್ದೇ ಭೀತಿ. ಸರ್ಕಾರ ಕೂಡ ಅಷ್ಟೇ ಜನಜಾಗೃತಿ ಮೂಡಿಸುತ್ತಿದೆ. ಆದರೆ ಉಡುಪಿಯ ಕಾರ್ಕಳದ ಪಳ್ಳಿ ಗ್ರಾಮದಲ್ಲಿ ನಡೆದ ತುಳು ಯಕ್ಷಗಾನದಲ್ಲೂ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸಲಾಗಿದೆ.
ಸಸಿಹಿತ್ಲು ಮೇಳದ ಪ್ರಸಂಗದಲ್ಲಿ ಬಂದ ಹಾಸ್ಯ ಪಾತ್ರಧಾರಿ ಕೊರೊನಾ ಬಗ್ಗೆ ಚರ್ಚೆ ನಡೆಸಿ, ಜಾಗೃತಿ ಮೂಡಿಸಿದ್ದಾರೆ. ಉಡುಪಿಯ ನಿಂಜೂರಿನಲ್ಲಿ ಕಳೆದ ರಾತ್ರಿ ತುಳು ಯಕ್ಷಗಾನ ಪ್ರದರ್ಶನ ನಡೆಯಿತು. ಈ ವೇಳೆ ಪ್ರಸಂಗದ ಹಾಸ್ಯ ಪಾತ್ರದಾರಿ ಪ್ರಸನ್ನ ಶೆಟ್ಟಿ ಬೈಲೂರು ಅವರು ಹಾಸ್ಯಗಾರನಾಗಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪ್ರವೇಶ ಮಾಡಿದ್ದಾರೆ. ಈ ವೇಳೆ ಹಾಸ್ಯ ಮಯವಾಗಿಯೇ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
Advertisement
Advertisement
ಮೊದಲು ಭಾಗವತರಿಗೆ ಕೆಮ್ಮು, ಶೀತ ಇದೆಯೇ ಎಂದು ಕೇಳಿದ ಪಾತ್ರಧಾರಿ ಈಗೆಲ್ಲಾ ಮುಖಕ್ಕೆ ಅಡ್ಡ ಪಟ್ಟಿ ಧರಿಸದೆ ಎಲ್ಲೂ ಹೋಗುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಕೊರೊನಾ ವೈರಸ್ ಇಂಗ್ಲಿಷ್ ಶಬ್ದವಾದ ಕಾರಣ, ಯಕ್ಷಗಾನದಲ್ಲಿ ಈ ಶಬ್ದ ಬಳಕೆಗೆ ಅವಕಾಶವಿಲ್ಲದೆ, ಕೊರಂಬು ಬೈರಾಸ್ ಎಂದು ಹಾಸ್ಯದ ಧಾಟಿಯಲ್ಲಿ ಈ ವೈರಸ್ ಬಗ್ಗೆ ಎಚ್ಚರಿಕೆ ಮೂಡಿಸಿದ್ದಾರೆ. ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಈ ಹಾಸ್ಯ ಜಾಗೃತಿಗೆ ಕೈ ಜೋಡಿಸಿದರು.
Advertisement
Advertisement
ರಂಗನಾಯಕಿ ಎಂಬ ಯಕ್ಷಗಾನ ಸಾಮಾಜಿಕ ಕಥಾ ಪ್ರಸಂಗ ಆಗಿರುವುದರಿಂದ ಪಾತ್ರಗಳಿಗೆ ಮುಕ್ತವಾದ ಅವಕಾಶ ಇರುತ್ತದೆ. ಪ್ರಸಕ್ತ ವಿಚಾರಗಳ ಬಗ್ಗೆ ಮಾತನಾಡುವ, ಚರ್ಚೆ ಮಾಡುವ ಅವಕಾಶ ಇದೆ. ಪೌರಾಣಿಕ ಪಾತ್ರಗಳೂ ಪ್ರಸಕ್ತ ವಿಚಾರವನ್ನು ಮಾತನಾಡುತ್ತಾರೆ ಎಂದು ಹಿರಿಯ ಯಕ್ಷಗಾನ ಕಲಾವಿದ ಅಲೆವೂರು ರಾಜೇಶ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.