ಕೋಲ್ಕತ್ತಾ: ವರದಕ್ಷಿಣೆಯೇ ಬೇಡ ಎಂದಿದ್ದ ವರನಿಗೆ 1 ಲಕ್ಷ ರೂಪಾಯಿ ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಉಡುಗೊರೆಯಾಗಿ ನೀಡಿ ಮಗಳನ್ನು ಧಾರೆಯೆರೆದು ಕೊಟ್ಟ ವಿಶೇಷ ಮದುವೆಯೊಂದು ಕೋಲ್ಕತ್ತಾದಲ್ಲಿ ನಡೆದಿದೆ.
ಕೋಲ್ಕತ್ತಾದ ಶಿಕ್ಷಕ ಸೂರ್ಯಕಾಂತ್ ಬರಿಕ್ ಅವರ ಮದುವೆಯು ಅದೇ ಊರಿನ ಪ್ರಿಯಾಂಕಾ ಬೇಜ್ ಅವರ ಜೊತೆ ಖೇಜುರಿಯ ಕಲ್ಯಾಣ ಮಂಟಪವೊಂದರಲ್ಲಿ ನೆರವೇರಬೇಕಿತ್ತು. ಈ ವೇಳೆ ಕಲ್ಯಾಣಮಂಟಪಕ್ಕೆ ಬಂದ ಅವರಿಗೆ ಬರೋಬ್ಬರಿ 1 ಲಕ್ಷ ರೂ. ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಗಿಫ್ಟ್ ಮಾಡಿದ್ದಾರೆ. ವರದಕ್ಷಿಣೆ ನಿರಾಕರಿಸಿ ಎಲ್ಲರಿಗೂ ಮಾದರಿಯಾದ ವರನಿಗೆ ಈ ಉಡುಗೊರೆ ನೋಡಿ ಸಿಕ್ಕಪಟ್ಟೆ ಖುಷಿಯಾಗಿದೆ. ಈ ವಿಶೇಷ ಉಡುಗೊರೆ ವಿಚಾರ ಸದ್ಯ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ.
Advertisement
Advertisement
ನಾನು ಯಾವುದೇ ವರದಕ್ಷಿಣೆ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಆದರೆ ನಾನು ಕಲ್ಯಾಣ ಮಂಟಪಕ್ಕೆ ಬಂದಾಗ, ಪುಸ್ತಕಗಳ ಬೃಹತ್ ರಾಶಿಯನ್ನು ಉಡುಗೊರೆಯಾಗಿ ಕಂಡು ತುಂಬಾ ಆಶ್ಚರ್ಯವಾಯಿತು ಎಂದು ಬರಿಕ್ ಹೇಳಿದ್ದಾರೆ. ಹಾಗೆಯೇ ನನ್ನ ಪತಿಗೆ ಓದುವ ಹಂಬಲ ಹೆಚ್ಚು. ನನಗೂ ಓದುವ ಹವ್ಯಾಸವಿದೆ. ಇದನ್ನು ತಿಳಿದ ನನ್ನ ತಂದೆ ಈ ಗಿಫ್ಟ್ ಕೊಟ್ಟಿದ್ದಾರೆ ಎಂದು ವಧು ತಿಳಿಸಿದ್ದಾರೆ.
Advertisement
Advertisement
ಈ ಬಗ್ಗೆ ವಧುವಿನ ಕುಟುಂಬದವರು ಮಾತನಾಡಿ, ಈ ಪುಸ್ತಕಗಳನ್ನು ಕೊಲ್ಕತ್ತಾ ಕಾಲೇಜು ರಸ್ತೆ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಪ್ರಕಾಶನವಾದ ಉದ್ಧೋಧನ್ ಪಬ್ಲಿಷ್ ಹೌಸ್‍ನಿಂದ ಖರೀದಿಸಿದ್ದೇವೆ. ಈ ಪುಸ್ತಕ ಸಂಗ್ರಹಣೆಯಲ್ಲಿ ರವೀಂದ್ರನಾಥ ಟ್ಯಾಗೋರ್, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಮತ್ತು ಶರತ್ ಚಂದ್ರ ಚಟ್ಟೋಪಾಧ್ಯಾಯವರ ಸಂಪೂರ್ಣ ಕೃತಿಗಳು ಇವೆ ಎಂದರು.
ವರದಕ್ಷಿಣೆ ಪಡೆಯುವುದು ಹಾಗೂ ಕೊಡುವುದು ಅಪರಾಧ ಎಂದು ತಿಳಿದಿದ್ದರೂ ಅನೇಕರು ವರದಕ್ಷಿಣೆಯಿಲ್ಲದೆ ಮದುವೆ ಆಗುವುದಿಲ್ಲ. ಇಂತಹ ಜನರ ನಡುವೆಯೂ ಸೂರ್ಯಕಾಂತ್ ಅವರ ತರಹ ವರದಕ್ಷಿಣೆ ನಿರಾಕರಿಸುವವರ ಸಂಖ್ಯೆ ಕಡಿಮೆ. ಸೂರ್ಯಕಾಂತ್ ಅವರು ಇತರರಿಗೆ ಮಾದರಿ ಎಂದು ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ.