ನವದೆಹಲಿ: ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಹಿನ್ನೆಲೆ ಇಂಡಿಗೋ ಏರ್‌ಲೈನ್ಸ್‌ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಶನಿವಾರ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ವಿಮಾನಯಾನದ ವಿಳಂಬ, ರದ್ದತಿ ಮತ್ತು ಕಾರ್ಯಾಚರಣೆಯ ಸ್ಥಗಿತಗಳಿಗೆ ವಿವರಣೆ ನೀಡುವಂತೆ ಡಿಜಿಸಿಎ ಕೇಳಿದೆ.
ಪ್ರಶ್ನೆಗಳಿಗೆ 24 ಗಂಟೆಗಳ ಒಳಗೆ ಪ್ರತಿಕ್ರಿಯೆ ನೀಡಬೇಕು. ಒಂದು ವೇಳೆ ವಿಫಲವಾದರೆ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಸಿಎ ಎಚ್ಚರಿಕೆ ನೀಡಿದೆ.
ಪ್ರತಿದಿನ ನೂರಾರು ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆ ಮತ್ತು ಸಂಕಷ್ಟ ಎದುರಾಗಿದೆ. ದೊಡ್ಡ ಪ್ರಮಾಣದ ಕಾರ್ಯಾಚರಣೆ ಕುಸಿತವು ಯೋಜನೆ, ಮೇಲ್ವಿಚಾರಣೆ ಮತ್ತು ಸಂಪನ್ಮೂಲ ನಿರ್ವಹಣೆಯಲ್ಲಿನ ಗಮನಾರ್ಹ ಲೋಪಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅಸಮಾಧಾನ ಹೊರಹಾಕಿದೆ.
ರದ್ದತಿ, ದೀರ್ಘ ವಿಳಂಬ ಮತ್ತು ಬೋರ್ಡಿಂಗ್ ನಿರಾಕರಣೆ ಸಮಯದಲ್ಲಿ ಅಗತ್ಯ ಮಾಹಿತಿ ಮತ್ತು ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸುವಲ್ಲಿ ಇಂಡಿಗೋ ವಿಫಲವಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ಲೋಪಕ್ಕೆ ಸಿಇಒ ಅವರನ್ನೇ ಡಿಜಿಸಿಎ ನೇರ ಹೊಣೆಗಾರರನ್ನಾಗಿ ಮಾಡಿದೆ. ವಿಶ್ವಾಸಾರ್ಹ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರಯಾಣಿಕರಿಗೆ ಅರ್ಹವಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಅವರು ತಮ್ಮ ಕರ್ತವ್ಯದಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದೆ.

