ಮಡಿಕೇರಿ: ವಯಸ್ಸಾಗಿದ್ದರೂ ಮದುವೆ ಆಗದಿರುವುದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpet) ಹೊರವಲಯ ಕೆ.ಬೋಯಿಕೇರಿಯಲ್ಲಿ ನಡೆದಿದೆ.
ಮೃತನನ್ನು ಮಡಿಕೇರಿ (Madikeri) ತಾಲೂಕು ಐಯ್ಯಂಗೇರಿ ಸಣ್ಣಪುಲಿಕೋಟು ಗ್ರಾಮ ನಿವಾಸಿ ಬಿ.ಪಿ.ಅನಿಲ್ ಕುಮಾರ್ ಅಲಿಯಾಸ್ ಸತೀಶ್ (40) ಎಂದು ಗುರುತಿಸಲಾಗಿದ್ದು, ಮರದ ಆಚಾರಿ ಕೆಲಸ ಮಾಡುತ್ತಿದ್ದ.ಇದನ್ನೂ ಓದಿ: ಪೂಜೆಯ ನೆಪದಲ್ಲಿ ಚಿನ್ನಾಭರಣ ದೋಚಿದ ಖತರ್‌ನಾಕ್ ಜೋಡಿ ಅಂದರ್!
ಕುಟುಂಬ ನಿರ್ವಹಣೆಗಾಗಿ ಕೆಲಸ ಅರಸಿಕೊಂಡು ಬಂದ್ದಿದ್ದವರು ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳ ನಂತರ ಮೃತ ಸತೀಶ್‌ನ ಅಣ್ಣ ಬೆಳ್ಯಪ್ಪ ವಿರಾಜಪೇಟೆ ನಗರದ ಚಿಕ್ಕಪೇಟೆಯಲ್ಲಿ ಮಳಿಗೆಯೊಂದನ್ನು ಬಾಡಿಗೆ ಪಡೆದಿದ್ದರು. ಅಲ್ಲಿ ಕೋವಿ ದುರಸ್ತಿ ಮಾಡುವ ಕೆಲಸವನ್ನು ಆರಂಭಿಸಿದರು. ಆದರೆ ಆಚಾರಿ ಕೆಲಸದ ಒತ್ತಡದಲ್ಲಿ ಸತೀಶ್ ಮದ್ಯ ಸೇವನೆ ಮಾಡುವ ಚಟವನ್ನು ಬೆಳೆಸಿಕೊಂಡಿದ್ದ.
ಸತೀಶ್, ದೇವಯ್ಯ ಎಂಬುವವರ ಮನೆಯಲ್ಲಿ ಬಾಡಿಗೆಗಿದ್ದು, ತನ್ನ ತಾಯಿ ಮತ್ತು ಅಣ್ಣನೊಂದಿಗೆ ವಾಸವಾಗಿದ್ದರು. ಸಹೋದರರ ಮಧ್ಯೆ ಅನ್ಯೋನ್ಯ ಸಂಬಂಧವಿತ್ತು. ಹಿರಿಯಣ್ಣನಿಗೆ ಮದುವೆಯಾಗಿ ಮೂರು ಮಕ್ಕಳಿದ್ದವು. ಆದರೆ ವಯಸ್ಸು 40 ಆಗಿದ್ದರೂ ಕೂಡ ಸತೀಶ್‌ಗೆ ಮದುವೆಯಾಗಿಲ್ಲ ಎನ್ನುವ ಕೊರಗು ಕಾಡುತ್ತಿತ್ತು. ಇದರಿಂದ ಸತೀಶ್ ಕೂಡ ಆಗಾಗ ಸಾಯವ ವಿಚಾರವಾಗಿ ಮಾತನಾಡುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಸುಮಾರು 9:30ರ ವೇಳೆಗೆ ಮನೆಗೆ ಬಂದ ಸತೀಶ್ ಕೈಕಾಲು ತೊಳೆದು ಊಟಕ್ಕೆ ಸಿದ್ಧನಾಗಿದ್ದ. ಆದರೆ ಅಣ್ಣ ಮತ್ತು ತಾಯಿ ಇದ್ದರೂ ಕೂಡ ಏಕಾಏಕಿ ಎದ್ದು ಕೋಣೆಯೊಳಗೆ ಹೋದ. ಒಳಗೆ ಹೋಗಿ ಕೋಣೆಯಲ್ಲಿದ್ದ ಕೋವಿಯಿಂದ ತಲೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಿಣಾಮ ತಲೆ ಭಾಗ ಛಿದ್ರವಾಗಿದೆ.
ರಾತ್ರಿ 09:45 ಸುಮಾರಿಗೆ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಮಾಹಿತಿ ಬಂದಿದ್ದು, ಮೃತನ ಅಣ್ಣ ಬೆಳ್ಯಪ್ಪ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಮೃತದೇಹವನ್ನು ಮಡಿಕೇರಿ ಶವಗಾರಕ್ಕೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಸಿಗರೇಟ್ ಸೇದುವ ವಿಚಾರಕ್ಕೆ ಗಲಾಟೆ – ಪಾರ್ಟಿಯಲ್ಲೇ ಸೇಹಿತನ ಕೊಲೆ