ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಸ್ಯಾಂಡಲ್‍ವುಡ್ ಮತ್ತೊಂದು ಹೈವೋಲ್ಟೇಜ್ ಸಿನಿಮಾವಾಗಿದೆ. ಇದೀಗ ಈ ಚಿತ್ರದ ಮಗದೊಂದು ಟೀಸರ್ ಬಿಡುಗಡೆಯಾಗಿದೆ.
ರಕ್ಷಿತ್ ಹುಟ್ಟುಹಬ್ಬದ ಪ್ರಯುಕ್ತ ಗುರುವಾರವೇ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಟೀಸರ್ ನ ಕ್ವಾಲಿಟಿ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ‘ರಾಕ್ಷಸನ ಎದುರಿಸಬೇಕಾದರೆ, ಮೊದಲು ನಮ್ಮೊಳಗಿನ ರಾಕ್ಷಸನಿಂದ ಮುಕ್ತವಾಗಬೇಕು” ಎಂಬ ಡೈಲಾಗ್ ಅಭಿಮಾನಿಗಳಿಗೆ ಇಷ್ಟವಾಗಿದೆ.
ಕೆಜಿಎಫ್ ಚಿತ್ರದಂತೆ 1980ರ ದಶಕದ ಬ್ಯಾಕ್‍ಡ್ರಾಪ್‍ನಲ್ಲಿ ಸಾಗುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಗೆ ಸಾವಿರಾರು ಜನ ಕಲಾವಿದರು ಸಾಥ್ ನೀಡಿದ್ದಾರೆ. ಬಿಡುಗಡೆಯಾದ ಒಂದೇ ದಿನದಲ್ಲಿ ಯೂಟ್ಯೂಬ್‍ನಲ್ಲಿ ನಂಬರ್ 1 ಟ್ರೆಂಡಿಂಗ್ ಆಗಿದೆ.
ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಪಂಚ ಭಾಷೆಯಲ್ಲಿ ಬೆಳ್ಳಿತೆರೆಗೆ ಬರಲಿದೆ. ಈ ಚಿತ್ರಕ್ಕೆ ಎಚ್.ಕೆ ಪ್ರಕಾಶ್ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೋಟಿ ಕೋಟಿ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ನಟಿ ಶಾನ್ವಿ ಶ್ರೀವತ್ಸವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ರಕ್ಷಿತ್ ಶೆಟ್ಟಿ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಗುರುವಾರ ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಹಲವು ತಿಂಗಳ ಬಳಿಕ ಸಾಮಾಜಿಕ ಜಾಲತಾಣಕ್ಕೆ ಮರಳಿದ್ದು, ಅವನೇ ಶ್ರೀಮನ್ನಾರಾಯಣ ಚಿತ್ರದ ಇಂಟ್ರಸ್ಟಿಂಗ್ ಪೋಸ್ಟರ್ ಅನ್ನು ಟ್ವಿಟ್ಟರಿನಲ್ಲಿ ಪ್ರೊಫೈಲ್ ಫೋಟೋವನ್ನಾಗಿ ಹಾಕಿದ್ದರು.