ಚೆನ್ನೈ: ದೇಶದ ಅಟೋಮೊಬೈಲ್ ಉದ್ಯಮ ಕುಸಿತಕ್ಕೆ ಹೊಸ ಪೀಳಿಗೆಯ ಜನತೆಯಲ್ಲಿನ ಬದಲಾದ ಚಿಂತನೆಯೇ ಕಾರಣ. ಓಲಾ, ಉಬರ್ ನಂತಹ ಸೇವೆಗಳನ್ನು ಹೊಸ ಪೀಳಿಗೆಯ ಜನತೆ ಬಳಸುತ್ತಿರುವುದಿರಂದ ದೇಶದಲ್ಲಿ ಅಟೋಮೊಬೈಲ್ ಕ್ಷೇತ್ರದ ಕುಸಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮೋದಿ ಸರ್ಕಾರಕ್ಕೆ ಅಧಿಕಾರಕ್ಕೆ ಏರಿ 100 ದಿನವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಅಟೋಮೊಬೈಲ್ ಕ್ಷೇತ್ರದ ಕುಸಿತಕ್ಕೆ ಹಲವಾರು ಕಾರಣಗಳಿವೆ. ಇದರಲ್ಲಿ ಹೊಸ ತಲೆಮಾರಿನ ಜನ ವಾಹನಗಳನ್ನು ಖರೀದಿಸಲು ಹೋಗುತ್ತಿಲ್ಲ. ಇದರ ಜೊತೆಗೆ ಬಿಎಸ್6(ಭಾರತ್ ಸ್ಟೇಜ್ 6) ಮಾನದಂಡವೂ ಕಾರಣ ಎಂದು ತಿಳಿಸಿದರು. ಇದನ್ನೂ ಓದಿ: ಗಮನಿಸಿ, 2020 ರಿಂದ ಬಿಎಸ್4 ವಾಹನಗಳ ಮಾರಾಟ ರದ್ದು? ಏನಿದು ಬಿಎಸ್6?
Advertisement
ಹೊಸ ಪೀಳಿಗೆಯ ಜನ ಇಎಂಐ ಮೂಲಕ ವಾಹನ ಖರೀದಿಸುವ ಆಲೋಚನೆಯನ್ನು ಬಿಟ್ಟು ಓಲಾ, ಉಬರ್ ಅಥವಾ ಮೆಟ್ರೋ ಸೇವೆಯನ್ನು ಹೆಚ್ಚು ಬಳಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
Advertisement
ಅಟೋಮೊಬೈಲ್ ಕಂಪನಿಗಳು ಈಗ ವಿಧಿಸುವ ಶೇ.28 ಜಿಎಸ್‍ಟಿಯನ್ನು ಶೇ.18ಕ್ಕೆ ಇಳಿಸುವ ಬೇಡಿಕೆಯನ್ನು ಮುಂದಿಟ್ಟಿವೆ. ಈ ಬಗ್ಗೆ ಗೋವಾದಲ್ಲಿ ನಡೆಯಲಿರುವ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಶೇ.18ಕ್ಕೆ ಜಿಎಸ್‍ಟಿ ಇಳಿಕೆಯಾಗುತ್ತಾ ಎಂದು ಪ್ರಶ್ನಿಸಿದ್ದಕ್ಕೆ, ಈ ಸಂದರ್ಭದಲ್ಲಿ ನಾನೊಬ್ಬಳೇ ಜಿಎಸ್‍ಟಿ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.ಇದನ್ನೂ ಓದಿ: 2 ಲಕ್ಷ ರೂ. ಡಿಸ್ಕೌಂಟ್ ಆಫರ್ – ಯಾವ ಕಾರಿನ ಬೆಲೆ ಎಷ್ಟು ಇಳಿಕೆ?
Advertisement
ಆರ್ಥಿಕತೆ ಕುಸಿಯುತ್ತಿರುವ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್ ಜುಲೈ ತಿಂಗಳಿನಲ್ಲಿ ದೇಶದಲ್ಲಿನ ವಿವಿಧ ಕ್ಷೇತ್ರದ ಉದ್ಯಮಿಗಳ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದ್ದರು.
Advertisement
ಸತತ 8 ತಿಂಗಳಿನಿಂದ ಅಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಇಳಿಕೆ ಆಗುತ್ತಿದ್ದು ಆಗಸ್ಟ್ ತಿಂಗಳಿನಲ್ಲೂ ಮುಂದುವರಿದಿದೆ. ಆಗಸ್ಟ್ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆಯಾಗಿದ್ದು 1997-98ರ ನಂತರ ಅತಿ ಕಡಿಮೆ ಪ್ರಯಾಣಿಕ ವಾಹನ ಮಾರಾಟವಾದ ತಿಂಗಳು ಎಂಬ ಕೆಟ್ಟ ಇತಿಹಾಸವನ್ನು ಬರೆದಿದೆ.
2018ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಪ್ರಯಾಣಿಕ ವಾಹನಗಳ ಮಾರಾಟ ಶೇ.31.57 ಕುಸಿತ ದಾಖಲಿಸಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 2,87,198 ಪ್ರಯಾಣಿಕ ವಾಹನಗಳು ಮಾರಾಟಗೊಂಡರೆ ಕಳೆದ ತಿಂಗಳು ಒಟ್ಟು 1,96,524 ವಾಹನಗಳು ಮಾರಾಟಗೊಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಎಸ್‍ಐಎಎಂ) ತನ್ನ ತಿಂಗಳ ವರದಿಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಪ್ರಯಾಣಿಕ ಕಾರು ವಿಭಾಗ ಭಾರೀ ಹೊಡೆತ ತಿಂದಿದೆ. ಪ್ರಯಾಣಿಕ ಕಾರುಗಳ ಮಾರಾಟ ಶೇ.41.09 ರಷ್ಟು ಇಳಿಕೆಯಾಗಿದೆ. 2018ರ ಆಗಸ್ಟ್ ನಲ್ಲಿ 1,96,847 ಕಾರುಗಳು ಮಾರಾಟಗೊಂಡಿದ್ದರೆ ಈ ಬಾರಿ 1,15,957 ಕಾರುಗಳು ಮಾರಾಟ ಕಂಡಿವೆ.
ಯುಟಿಲಿಟಿ ವೆಹಿಕಲ್(ಸಣ್ಣ ಪ್ರಮಾಣದ ವಸ್ತುಗಳನ್ನು ಸಾಗಿಸುವ ವಾಹನ) ಮಾರಾಟ ಕಳೆದ ವರ್ಷದ ಆಗಸ್ಟ್ ಗೆ ಹೋಲಿಸಿದರೆ ಸ್ವಲ್ಪ ಕುಸಿತ ಕಂಡಿದೆ. ಈ ಬಾರಿ ಶೇ.2.2 ರಷ್ಟು ಮಾರಾಟ ಕುಸಿದಿದೆ. ಈ ಬಾರಿ 71,085 ವಾಹನಗಳು ಮಾರಾಟಗೊಂಡರೆ ಕಳೆದ ಆಗಸ್ಟ್ ನಲ್ಲಿ 73,085 ವಾಹನಗಳು ಮಾರಾಟ ಕಂಡಿತ್ತು. ವ್ಯಾನ್ ವಿಭಾಗದಲ್ಲಿ ಶೇ.47.36 ಇಳಿಕೆಯಾಗಿದ್ದು ಕಳೆದ ಬಾರಿ 17,266 ವಾಹನಗಳು ಮಾರಾಟಗೊಂಡಿದ್ದು, ಈ ಆಗಸ್ಟ್ ತಿಂಗಳಿನಲ್ಲಿ 9,089 ವಾಹನಗಳು ಮಾರಾಟಗೊಂಡಿದೆ.
ದ್ವಿಚಕ್ರ ವಾಹನಗಳ ಮಾರಾಟದಲ್ಲೂ ಶೇ.22.24 ರಷ್ಟು ಇಳಿಕೆಯಾಗಿದೆ. ಈ ಬಾರಿ 15,14,196 ವಾಹನಗಳು ಮಾರಾಟಗೊಂಡರೆ ಕಳೆದ ಬಾರಿ 19,47,304 ದ್ವಿಚಕ್ರ ವಾಹನಗಳು ಮಾರಾಟಗೊಂಡಿತ್ತು. ಸ್ಕೂಟರ್ಸ್, ಮೋಟರ್ ಸೈಕಲ್, ಮೊಪೆಡ್ ಗಳ ಮಾರಾಟ ಅನುಕ್ರಮವಾಗಿ ಶೇ.22, ಶೇ.22 ಮತ್ತು ಶೇ.21 ರಷ್ಟು ಇಳಿಕೆ ಕಂಡಿದೆ.
ಮಧ್ಯಮ ಮತ್ತು ಹೆವಿ ಕಮರ್ಷಿಯಲ್ ವಾಹನ ಮಾರಾಟದಲ್ಲಿ ಶೇ.54.3 ಇಳಿಕೆಯಾಗಿದೆ. ಈ ಬಾರಿಯ ಆಗಸ್ಟ್ ನಲ್ಲಿ 15,573 ವಾಹನಗಳು ಮಾರಾಟಗೊಂಡಿದ್ದರೆ ಕಳೆದ ಬಾರಿ 34,073 ವಾಹನಗಳು ಮಾರಾಟ ಕಂಡಿತ್ತು. ಲೈಟ್ ಕಮರ್ಷಿಯಲ್ ವಾಹನಗಳು ಕಳೆದ ಆಗಸ್ಟ್ ನಲ್ಲಿ 50,595 ಮಾರಾಟ ಕಂಡಿದ್ದರೆ ಈ ಬಾರಿ 36,324 ವಾಹನಗಳು ಮಾರಾಟ ಕಂಡಿದೆ.
ಒಟ್ಟು ದೇಶದಲ್ಲಿ 97,32,040 ವಾಹನಗಳು ಮಾರಾಟವಾಗಿದೆ. 2018ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಶೇ.15.89 ರಷ್ಟು ಕುಸಿತಗೊಂಡಿದ್ದು, 1,15,70,401 ವಾಹನಗಳು ಮಾರಾಟಗೊಂಡಿತ್ತು. 2018 ಏಪ್ರಿಲ್ ಆಗಸ್ಟ್ ನಡುವೆ ಒಟ್ಟು 1,36,99,848 ವಾಹನಗಳು ಮಾರಾಟ ಕಂಡಿದ್ದರೆ 2019ರ ಏಪ್ರಿಲ್ ಆಗಸ್ಟ್ ನಡುವೆ 1,20,20,944 ವಾಹನಗಳು ಮಾರಾಟಗೊಂಡಿದೆ. ಇದನ್ನೂ ಓದಿ: ದೇಶದ ಮೊದಲ ಎಲೆಕ್ಟ್ರಿಕ್ ಎಸ್‍ಯುವಿ ಕಾರು ಬಿಡುಗಡೆ: ಎಷ್ಟು ಚಾರ್ಜ್ ಮಾಡಿದ್ರೆ ಎಷ್ಟು ಕಿ.ಮೀ ಓಡುತ್ತೆ?