Plane Crash | ಇಂಜಿನಿಯರ್‌ ಆಗುವ ಕನಸು ಕಂಡಿದ್ದ ಆಟೋ ಚಾಲಕನ ಮಗಳ ದುರಂತ ಅಂತ್ಯ

Public TV
1 Min Read
Payal Khatik 2

– ಶಿಕ್ಷಣಕ್ಕಾಗಿ ಮಾಡಿದ ಸಾಲ ತೀರಿಸೋಕೆ ದಿಕ್ಕು ತೋಚ್ತಿಲ್ಲ – ತಂದೆಯ ಕಣ್ಣೀರು

ಅಹಮದಾಬಾದ್‌: ಗುಜರಾತ್‌ನ ಹಿಮತ್‌ನಗರದ ಗೂಡ್ಸ್ ಆಟೋ ಚಾಲಕನ ಮಗಳಾದ ಪಾಯಲ್‌ ಖಾಟಿಕ್ (Payal Khatik) ಎಂಟೆಕ್‌ ಪದವಿಯ ಕನಸು ಹೊತ್ತು ಲಂಡನ್‌ಗೆ ಹೊರಟಿದ್ದಳು. ಆದರೆ ಅವಳ ಹಾಗೂ ಕುಟುಂಬದ ಕನಸು ಆಗಸದಲ್ಲಿ ಛಿದ್ರವಾಗಿದೆ. ಹೌದು, ಅಹಮದಾಬಾದ್‌ನಲ್ಲಿ (Ahmedabad)‌ ನಡೆದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ (Plane Crash) ಅವಳು ಸಾವನ್ನಪ್ಪಿದ್ದಾಳೆ.

ಪಾಯಲ್‌ ತಂದೆ ರಿಕ್ಷಾ ಚಾಲಕರಾಗಿದ್ದು, ಗುರುವಾರ ಮಗಳನ್ನು ವಿಮಾನ ಹತ್ತಿಸಿ ಉತ್ಸಾಹದಿಂದ ಕಳುಹಿಸಿದ್ದರು. ಅವಳು ಸುರಕ್ಷಿತವಾಗಿ ಲಂಡನ್‌ ತಲುಪುತ್ತಾಳೆ. ಅಲ್ಲಿ ಅಧ್ಯಯನ ಮಾಡಿ, ಉನ್ನತ ಸ್ಥಾನಕ್ಕೇರುತ್ತಾಳೆ ಎಂದು ಕುಂಟುಂಬಸ್ಥರು ಸಹ ಕನಸು ಕಂಡಿದ್ದರು. ಆದರೆ ವಿಧಿಯ ಆಟ ಮಾತ್ರ ಬೇರೆಯದೇ ಆಗಿತ್ತು. ಪಾಯಲ್‌ ಸಾವು ದೃಢಪಟ್ಟಿದ್ದು, ಡಿಎನ್‌ಎ ಪರೀಕ್ಷೆಯಿಂದ ಮೃತದೇಹ ಗುರುತಿಸಲಾಗಿದೆ. ಇದನ್ನೂ ಓದಿ: ಕನಸಿನ ಕೋರ್ಸ್‌ಗಾಗಿ ಲಂಡನ್‌ಗೆ ಹೊರಟಿದ್ದ ಯುವತಿಯ ದುರಂತ ಅಂತ್ಯ!

Payal Khatik 1 1

ಮಗಳ ಕನಸಿನ ಬಗ್ಗೆ ಮಾತಾಡಿರುವ ತಂದೆ ಸುರೇಶ್ ಖಾಟಿಕ್, ಕಾಲೇಜು ಮುಗಿಸಿದ ನಂತರ ಪಾಯಲ್ ನಮ್ಮೊಂದಿಗೆ ಇದ್ದಳು. ಅವಳು ಲಂಡನ್‌ನಲ್ಲಿ‌ ಹೆಚ್ಚಿನ ಅಧ್ಯಯನ ಮಾಡಲು ಬಯಸಿದ್ದಳು. ಅವಳ ಶಿಕ್ಷಣಕ್ಕಾಗಿ ಸಾಲ ಮಾಡಿದ್ದೆವು. ಅವಳಿಗೆ ಉದ್ಯೋಗ ಸಿಗುವ ಭರವಸೆ ಇತ್ತು. ಇದರಿಂದ ನಮ್ಮ ಬಡತನ ನೀಗುತ್ತದೆ ಎಂದು ಭಾವಿಸಿದ್ದೆವು. ಆದರೆ ಈಗ ಸಾಲ ಮರುಪಾವತಿಸಲು ಯಾವುದೇ ದಾರಿ ಇಲ್ಲ ಎಂದು ಕಣ್ಣೀರಿಟ್ಟದ್ದಾರೆ.

ಪಾಯಲ್ ಲಂಡನ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆಯಲು ಹೋಗುತ್ತಿದ್ದಳು. ಸ್ಥಳೀಯರು, ಯುವತಿ ಬಾಲ್ಯದಿಂದಲೂ ಶಾಲೆಯ ಟಾಪರ್ ಆಗಿದ್ದಳು ಎಂದು ಹೇಳಿಕೊಂಡಿದ್ದಾರೆ.

ಗುರುವಾರ ಅಹಮದಾಬಾದ್‍ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ (Air India) ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ಪತನ – ಮದುವೆಯಾಗಿದ್ದ Gay Couple ದುರಂತ ಸಾವು

Share This Article