ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯಲ್ಲಿ ಅಡುಗೆ ಕೆಲಸ ಮಾಡುವ ಮಹಿಳೆಯೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ 10,160 ರೂಪಾಯಿ ಹಣವನ್ನು ಚಾಲಕ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೊಡ್ಲಿಪೇಟೆಯ ಕೆಲಕೊಡ್ಲಿಯ ನಿವಾಸಿ ಪ್ರಸನ್ನರವರು ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಪ್ರಯಾಣಿಕರು ಬಿಟ್ಟುಹೋಗಿದ್ದ ಹಣವನ್ನು ವಾಪಸ್ ಕೊಟ್ಟು ಪ್ರಾಮಾಣಿಕತೆ ಮೆರೆದು ಮಾದರಿಯಾಗಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರಸನ್ನ ಅವರು ಹೊಸ ಮುನಿಸಿಪಾಲಿಟಿಯಿಂದ ಕೊಡ್ಲಿಪೇಟೆ ಆಟೋ ನಿಲ್ದಾಣಕ್ಕೆ ಬಂದಾಗ ಅವರ ಆಟೋದಲ್ಲಿ ಒಂದು ಸಣ್ಣ ಕೈ ಚೀಲ ಸಿಕ್ಕಿತ್ತು. ಅದನ್ನು ತೆರೆದು ನೋಡಿದಾಗ ಅದರಲ್ಲಿ 10,160 ರೂಪಾಯಿ ಹಣ ಮತ್ತು ಶ್ರೀ ಲಕ್ಷಿ ಸ್ವಸಹಾಯ ಸಂಘದ ಬ್ಯಾಂಕ್ ಪಾಸ್‍ಬುಕ್ ಇತ್ತು.
Advertisement
Advertisement
ಇದನ್ನು ನೋಡಿದ ತಕ್ಷಣ ಪ್ರಸನ್ನ ಅವರು ಸಹವರ್ತಿ ಆಟೋ ಚಾಲಕರಿಗೆ ವಿಷಯ ತಿಳಿಸಿದರು. ಬಳಿಕ ಎಲ್ಲರೂ ಸೇರಿ ಸ್ಥಳೀಯ ಉಪ ಪೊಲೀಸ್ ಠಾಣೆಗೆ ಹೋಗಿ ಆಟೋದಲ್ಲಿ ಸಿಕ್ಕ ಕೈ ಚೀಲವನ್ನು ಪೊಲೀಸರಿಗೆ ನೀಡಿದರು. ಆಗ ಪೊಲೀಸರು ಪಾಸ್‍ಬುಕ್ ಪರಿಶೀಲಿಸಿದಾಗ, ಈ ಕೈ ಚೀಲ ಹಾಗೂ ಹಣ ಉರ್ದು ಶಾಲೆಯಲ್ಲಿ ಅಡುಗೆ ಕೆಲಸ ನಿರ್ವಹಿಸುವ ಜರೀನಾ ಬಾನು ಅವರಿಗೆ ಸೇರಿದ್ದು ಎಂಬುದು ತಿಳಿದು ಬಂದಿದೆ. ಜರೀನಾ ಅವರು ಸಂಘದ ಹಣವನ್ನು ಬ್ಯಾಂಕಿಗೆ ಪಾವತಿಸಲು ತಂದಿದ್ದರು ಎಂದು ತಿಳಿದಿದೆ. ಮಾಹಿತಿ ಆಧಾರದ ಮೇರೆಗೆ ಜರೀನಾ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಹಣವನ್ನು ಹಿಂದಿರುಗಿಸಲಾಯಿತು.
Advertisement
ಈಗಿನ ಕಾಲದಲ್ಲಿ ಹಣಕ್ಕಾಗಿ ಮೋಸ ಮಾಡುವ ಮಂದಿಯೇ ಹೆಚ್ಚು. ಈ ನಡುವೆ ಪ್ರಾಮಾಣಿಕವಾಗಿ ಬಡ ಮಹಿಳೆಯ ಹಣವನ್ನು ಹಿಂದಿರುಗಿಸಿ ಪ್ರಸನ್ನ ಅವರು ಮಾನವೀಯತೆ ಮೆರೆದಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.