ನವದೆಹಲಿ: ಆಟೋ ಚಾಲಕನೊಬ್ಬ ತಾಯಿ ಮತ್ತು ಒಂದು ವರ್ಷದ ಮಗುವಿನ ಜೀವವನ್ನು ಉಳಿಸಿ, ಕೊನೆಗೆ ತನ್ನ ಜೀವವನ್ನೇ ಕಳೆದುಕೊಂಡಿರುವ ದುರದೃಷ್ಟಕರ ಘಟನೆ ದೆಹಲಿಯಲ್ಲಿ ನಡೆದಿದೆ.
30 ವರ್ಷದ ಪವನ್ ಶಾ ಇಬ್ಬರ ಜೀವ ಉಳಿಸಿದ ಆಟೋ ಡ್ರೈವರ್. ಶಾ ಕಳೆದ ಶನಿವಾರ ಬೆಳಗ್ಗೆ ಸುಮಾರು 10.45ಕ್ಕೆ ಪ್ರಯಾಣಿಕರನ್ನು ಬಿಟ್ಟು ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ದೆಹಲಿಯ ಮೀತಾಪುರ ಕಾಲುವೆಯ ಸೇತುವೆಯ ಮೇಲೆ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ನಿಂತಿದ್ದರು. ಅದನ್ನು ನೋಡಿದ ಶಾ ಆಟೋ ನಿಲ್ಲಿಸಿದ್ದಾರೆ. ನಂತರ ಶಾ ನೋಡನೋಡುತ್ತಿದ್ದಂತೆ ಮಹಿಳೆ ಮಗುವಿನೊಂದಿಗೆ ನೀರಿಗೆ ಬಿದ್ದಿದ್ದಾರೆ.
Advertisement
Advertisement
ಶಾ ಒಂದು ಕ್ಷಣವೂ ಯೋಚನೆ ಮಾಡದೇ ಅವರನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಬಳಿಕ ಈಜಿಕೊಂಡು ಮಹಿಳೆ ಬಳಿ ಹೋಗಿದ್ದಾರೆ. ಆದರೆ ಇಬ್ಬರನ್ನು ಒಂದೇ ಸಲ ಕಾಪಾಡಲು ಸಾಧ್ಯವಾಗುವುದಿಲ್ಲ ಎಂದು ಅರಿತ ಶಾ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣ ದಾರಿಯಲ್ಲಿ ಹೋಗುತ್ತಿದ್ದ ರಾಜವೀರ್, ಜಮೀಲ್ ಮತ್ತು ಸಂಜೀವ್ ಮೂವರು ಯುವಕರು ಶಾ ಕೂಗಿದ ಶಬ್ದ ಕೇಳಿ ಸಹಾಯಕ್ಕಾಗಿ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಈ ವೇಳೆ ಶಾ, ತಾಯಿ ಮತ್ತು ಮಗುವಿನ ತಲೆ ನೀರಿನಲ್ಲಿ ಮುಳುಗದಂತೆ ಮೇಲೆತ್ತಲು ಪ್ರಯತ್ನಿಸಿದ್ದರು. ತಕ್ಷಣ ಮೂವರು ಒಂದು ಮಾನವ ಸರಪಣಿ ಸಿದ್ಧಪಡಿಸಿ ತಾಯಿ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಶಾನನ್ನು ರಕ್ಷಿಸಲು ಹೋಗುವಷ್ಟರಲ್ಲಿ ನೀರಿನ ರಭಸಕ್ಕೆ ಶಾ ಕೊಚ್ಚಿ ಹೋಗಿದ್ದಾರೆ. ತನ್ನ ಪ್ರಾಣವನ್ನು ಲೆಕ್ಕಿಸದೆ ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿದ ಆಟೋ ಡ್ರೈವರ್ ಆತನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇತ್ತ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಶಾನನ್ನು ರಕ್ಷಿಸಲಾಗದೆ ಅಸಹಾಯಕವಾಗಿ ಮೂವರು ನೋಡುತ್ತಾ ನಿಂತಿದ್ದರು. ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.
Advertisement
ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರ ತಂಡ ಆಗಮಿಸಿ ಶೋಧಕಾರ್ಯ ನಡೆಸಿದ್ದಾರೆ. ಅವರ ಜೊತೆ ಇತರ ಆಟೋ ಚಾಲಕರು ಕೂಡ ಬೋಟ್ ಮೂಲಕ ಹೋಗಿ ಹುಡುಕಾಟ ನಡೆಸಿದ್ದಾರೆ. ಆದರೆ ಎಷ್ಟು ಹುಡುಕಾಡಿದರೂ ಶಾ ಮಾತ್ರ ಪತ್ತೆಯಾಗಿಲ್ಲ. ಆದ್ದರಿಂದ ಅವರು ಮೃತಪಟ್ಟಿರಬಹದು ಎಂದು ಶಂಕಿಸಲಾಗಿದೆ.
ಇತ್ತ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಮಹಿಳೆ ಪತಿಯೊಂದಿಗೆ ಜಗಳವಾಡಿಕೊಂಡು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದರು ಎಂದು ತಿಳಿದು ಬಂದಿದೆ. ಸದ್ಯಕ್ಕೆ ಜೀವನ ರಕ್ಷಾ ಶೌರ್ಯ ಪ್ರಶಸ್ತಿಗೆ ಆಟೋ ಡ್ರೈವರ್ ಶಾ ಹೆಸರನ್ನು ಶಿಫಾರಸ್ಸು ಮಾಡಲಾಗುವುದು ಎಂದು ಡಿಸಿಪಿ ಚಿನ್ಮಯ್ ಬಿಸ್ವಾಲ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv