ಹಾಸನ: ಟಿಪ್ಪರ್ ಚಾಲಕನೊಬ್ಬ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಆಟೋಗಳಿಗೆ ಡಿಕ್ಕಿ ಹೊಡೆದಿದ್ದು, ಓರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳೇನರಸೀಪುರದಲ್ಲಿ ನಡೆದಿದೆ.
ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಇರುವ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಆಟೋ ಚಾಲಕ ಶಂಕರ್ ಮೃತ ದುರ್ದೈವಿ. ಹಾಸನ ಕಡೆಯಿಂದ ಮೈಸೂರು ಕಡೆಗೆ ವೇಗವಾಗಿ ಬಂದ ಟಿಪ್ಪರ್, ಅಲ್ಲಿದ್ದ ಸರದಿ ಸಾಲಿನ ಆಟೋಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಆಟೋ ಚಾಲಕ ಶಂಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೂರು ಮಂದಿಗೆ ಗಂಭೀರ ಗಾಯಗಳಾಗಿವೆ.
ಆಟೋಗಳು ಸಹ ನುಜ್ಜುಗುಜ್ಜಾಗಿವೆ. ಅದೇ ವೇಗದಲ್ಲಿ ಅಲ್ಲಿಂದ ನಿಲ್ಲಿಸದ ಟಿಪ್ಪರ್ ಚಾಲಕ ಪರಾರಿಗೆ ಯತ್ನಿಸಿದ್ದಾನೆ. ಆದರೆ ಅಂಬೇಡ್ಕರ್ ನಗರದ ಬಳಿ ವೇಗವಾಗಿ ಬಂದು ತಿರುವಿನಲ್ಲಿ ಪಲ್ಟಿಯಾಗಿದೆ. ಎಂಸ್ಯಾಂಡ್ ತುಂಬಿದ ಟಿಪ್ಪರ್ ವಾಹನ ಇದಾಗಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸದ್ಯ ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಳೇನರಸೀಪುರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಟಿಪ್ಪರ್ ಚಾಲಕನಿಗೆ ಶೋಧ ಮುಂದುವರಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv