ನವದೆಹಲಿ: ರಾಜ್ಯ ರಾಜಧಾನಿಯಲ್ಲಿ ಈಗ ವಿಪರೀತ ಚಳಿ ಇದ್ದು, ಜನರು ತತ್ತರಿಸಿ ಹೋಗಿದ್ದಾರೆ. ಮಾಲಿನ್ಯದ ಜೊತೆಗೆ ಕೊರೆಯುವ ಚಳಿ ದೆಹಲಿಗರನ್ನು ಸುಸ್ತಾಗಿಸಿದೆ. ಆದರೆ ಚಳಿಯಿಂದ ಪ್ರಯಾಣಿಕರನ್ನು ರಕ್ಷಿಸಲು ಆಟೋ ಚಾಲಕರೊಬ್ಬರ ಸಿಂಪಲ್ ಐಡಿಯಾ ಎಲ್ಲರ ಮನ ಗೆದ್ದಿದೆ.
ಹಿಮಪಾತವಾಗುವ ಶಿಮ್ಲಾ ಚಳಿಯನ್ನೂ ಮೀರಿಸುವಂತೆ ದೆಹಲಿಯಲ್ಲಿ ಚಳಿ ದಾಖಲಾಗಿದೆ. ಶನಿವಾರ ಮುಂಜಾನೆ 2.4 ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನ ರಾಷ್ಟ್ರ ರಾಜಧಾನಿಯಲ್ಲಿ ದಾಖಲಾಗಿತ್ತು. ಅಲ್ಲದೆ ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಚಳಿ ಇನ್ನೂ ಹೆಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಹನಗಳಲ್ಲಿ ಹೋಗುವಾಗ ಸಾಮಾನ್ಯವಾಗಿ ಚಳಿಯಾಗುತ್ತೆ. ಆದರೆ ಕೊರೆಯುವ ಚಳಿಯಲ್ಲಿ ವಾಹನಗಳಲ್ಲಿ ಪ್ರಯಾಣಿಸೋದು ತುಂಬಾ ಕಷ್ಟ. ಇದನ್ನು ಮನಗಂಡ ಆಟೋ ಚಾಲಕರೊಬ್ಬರು ಪ್ರಯಾಣಿಕರನ್ನು ಚಳಿಯಿಂದ ರಕ್ಷಿಸಲು ಸಖತ್ ಪ್ಲಾನ್ ಮಾಡಿದ್ದಾರೆ. ತಮ್ಮ ಆಟೋದಲ್ಲಿ ಪ್ರಯಾಣಿಕರು ಕೂರುವ ಸ್ಥಳದ ಸುತ್ತ ಬಬಲ್ ನೆಟ್ ಹಾಕಿ ಚಳಿಯಿಂದ ಪ್ರಯಾಣಿಕರನ್ನು ರಕ್ಷಿಸುತ್ತಿದ್ದಾರೆ.
https://twitter.com/Polychai1/status/1209160475348480000
ಪೊಲಿಚಾಯ್ ಹೆಸರಿನ ಟ್ವಿಟ್ಟರ್ ಬಳಕೆದಾರರೊಬ್ಬರು ಆಟೋ ಚಾಲಕನ ಐಡಿಯಾಗೆ ಫಿದಾ ಆಗಿದ್ದು, ಈ ವಿಶೇಷ ಆಟೋದ ವಿಡಿಯೋ ಮಾಡಿ ಜಿಫ್ ಫಾರ್ಮೆಟ್‍ನಲ್ಲಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಆಟೋವಾಲಾ ನನ್ನ ಹೃದಯವನ್ನು ಗೆದ್ದಿದ್ದಾರೆ. ಇದು ನೋಡಲು ಸಿಂಪಲ್ ಎನಿಸಿದರೂ ಪ್ರಯಾಣಿಕರನ್ನು ಚಳಿಯಿಂದ ರಕ್ಷಿಸುತ್ತದೆ. ದೆಹಲಿ ಚಳಿಗೆ ಇದು ಸೂಪರ್ ಉಪಾಯ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಸದ್ಯ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಆಟೋ ಚಾಲಕನ ಐಡಿಯಾಗೆ ಫಿದಾ ಆಗಿದ್ದಾರೆ. ಸಿಂಪಲ್ ಆಗಿ ಪರಿಣಾಮಕಾರಿ ಉಪಾಯ ಮಾಡಿರುವ ಚಾಲಕನಿಗೆ ಭೇಷ್ ಎನ್ನುತ್ತಿದ್ದಾರೆ. ನಿಮಗಾದರೂ ನಮ್ಮ ಕಷ್ಟ ಅರ್ಥವಾಯ್ತಲ್ಲ ಥ್ಯಾಂಕ್ ಯೂ ಎಂದು ಆಟೋವಾಲಾನ ಐಡಿಯಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.