ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದ ಒಂಟಿ ಮಹಿಳೆಯನ್ನು ಅಡ್ಡಗಟ್ಟಿ ಚಿನ್ನದ ಸರವನ್ನು ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಸಿನಿಮೀಯ ರೀತಿಯಲ್ಲಿ ಆಟೋ ಚಾಲಕರೊಬ್ಬರು ಚೇಸ್ ಮಾಡಿ ಹಿಡಿದಿದ್ದಾರೆ.
ಸಿಲಿಕಾನ್ ಸಿಟಿಯ ಮಾರತಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾರತಹಳ್ಳಿಯ ಮ್ಯಾಕ್ಸ್ ಶೋರೂಮ್ ಮುಂಭಾಗ ಮಹಿಳೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕೆ.ಜಿ ಹಳ್ಳಿ ನಿವಾಸಿ ವಿಘ್ನೇಶ್ ಮಹಿಳೆಯ ಚಿನ್ನದ ಸರಕ್ಕೆ ಹೊಂಚು ಹಾಕಿ, ಆಕೆಯನ್ನು ಅಡ್ಡಗಟ್ಟಿ ಚಿನ್ನದ ಸರವನ್ನು ಕಿತ್ತು ಪರಾರಿ ಆಗುತ್ತಿದ್ದ. ಈ ವೇಳೆ ಕಳ್ಳತನದ ದೃಶ್ಯವನ್ನು ಗಮನಿಸಿದ ಆಟೋ ಚಾಲಕ ಹನುಮಂತ ಕಳ್ಳನನ್ನು ಹಿಂಬಾಲಿಸಿಕೊಂಡು ಹೋಗಿ ಆತನ ದ್ವಿಚಕ್ರ ವಾಹನಕ್ಕೆ ಆಟೋವನ್ನು ಡಿಕ್ಕಿ ಹೊಡೆಸಿದ್ದಾರೆ. ಇದನ್ನೂ ಓದಿ: ಸರ ಕದ್ದು ಕತ್ತನ್ನೂ ಸೀಳ್ತಾರೆ- ಬೆಂಗ್ಳೂರಿಗೆ ಎಂಟ್ರಿ ಕೊಟ್ಟಿದೆ ರಕ್ತಪಿಪಾಸು ಗ್ಯಾಂಗ್
ಆಗ ಮತ್ತೆ ಕಳ್ಳ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ಅವನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆ ಬಳಿಕ ಆಟೋ ಚಾಲಕ ಹನುಮಂತ ಹಾಗೂ ಸಾರ್ವಜನಿಕರು ಖದೀಮನನ್ನು ಮಾರತಹಳ್ಳಿ ಪೋಲಿಸರಿಗೆ ಒಪ್ಪಿಸಿದ್ದಾರೆ.
ಆಟೋ ಚಾಲಕ ಹನುಮಂತನ ಸಾಹಸದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಟೋ ಚಾಲಕನ ಧೈರ್ಯ ಮತ್ತು ಸಾಹಸಕ್ಕೆ ಪೋಲಿಸ್ ಇಲಾಖೆ ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದು, ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ಆಟೋ ಚಾಲಕ ಹನುಮಂತನಿಗೆ 10 ಸಾವಿರ ರೂ. ಬಹುಮಾನ ವಿತರಿಸಿದ್ದಾರೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.