ಚಿತ್ರದುರ್ಗ: ಎರಡು ಆಟೋಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟ ದುರ್ಘಟನೆ ಚಿತ್ರದುರ್ಗ ತಾಲೂಕಿನ ಬಿಳಿಚೋಡು ಗ್ರಾಮದ ಸಮೀಪದಲ್ಲಿ ನಡೆದಿದೆ.
ಕಾಕಬಾಳು ಗ್ರಾಮದ ಶಾರದಮ್ಮ (55) ಮೃತ ಮಹಿಳೆ. ಬೆಳಗ್ಗೆ ತರಕಾರಿ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಂದಿನಂತೆ ಗುರುವಾರ ಬೆಳಗ್ಗೆ ಕಾಕಬಾಳು ಗ್ರಾಮದ ಸುತ್ತಮುತ್ತಲಿನ ಗ್ರಾಮದ ರೈತರು ಚಿತ್ರದುರ್ಗದ ಮಾರುಕಟ್ಟೆಗೆ ಆಟೋದಲ್ಲಿ ತರಕಾರಿ ಸಾಗಿಸುತ್ತಿದ್ದರು. ಬಿಳಿಚೋಡು ಗ್ರಾಮದ ಸಮೀಪದಲ್ಲಿ ತರಕಾರಿ ಹಾಗೂ ಪ್ರಯಾಣಿಕರಿದ್ದ ಎರಡು ಆಟೋಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಶಾರದಮ್ಮ ಮೃತ ಪಟ್ಟಿದ್ದಾರೆ.
ಎರಡು ಆಟೋ ಮುಂಭಾದಲ್ಲಿ ಕುಳಿತಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ಆಟೋ ಸಂಪೂರ್ಣ ಜಖಂಗೊಂಡಿದ್ದು, ರಸ್ತೆ ಬದಿಯಲ್ಲಿ ತರಕಾರಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.
ಭರಮಸಾಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.