ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ- ಅಧಿಕಾರಿಗಳಿಂದ ಚುರುಕುಗೊಂಡ ಸ್ಥಳ ಪರಿಶೀಲನೆ

Public TV
2 Min Read
rcr airport collage

ರಾಯಚೂರು: ದೇಶದಲ್ಲಿಯೇ ಹಿಂದುಳಿದಿರುವ ರಾಯಚೂರು ನಗರಕ್ಕೆ ನಾಗರಿಕ ವಿಮಾನ ನಿಲ್ದಾಣ ಆರಂಭದ ಕನಸು ಚಿಗುರೊಡೆದಿದೆ. ಇಂದು ವಿಮಾನ ನಿಲ್ದಾಣಕ್ಕಾಗಿ ತಜ್ಞರ ತಂಡ ರಾಯಚೂರಿಗೆ ಆಗಮಿಸಿ ಸ್ಥಳ ಪರಿಶೀಲಿಸಿದೆ. ಆದರೆ ಈಗ ಗುರುತಿಸಿರುವ ಸ್ಥಳದಲ್ಲಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಚಿಮಣಿ ಅಡ್ಡಿಯಾಗಿದೆ. ಇದೇ ಕಾರಣಕ್ಕೆ ಯೋಜನೆ ಕೈತಪ್ಪುತ್ತಾ ಎನ್ನುವ ಅನುಮಾನ ಶುರುವಾಗಿದೆ.

ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದಲ್ಲಿಯೇ ಅತ್ಯಂತ ಹಿಂದುಳಿದಿರುವ ರಾಯಚೂರು ಜಿಲ್ಲೆಯಲ್ಲಿ ಕೃಷಿಯೊಂದಿಗೆ ಕೈಗಾರಿಕೆಗೆ ವಿಫುಲ ಅವಕಾಶಗಳಿವೆ. ಅಲ್ಲದೆ ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಶಾಖೋತ್ಪನ್ನ ಸ್ಥಾವರಗಳು ಇಲ್ಲಿವೆ. ಆದರೆ ಇಲ್ಲಿ ಬೃಹತ್ ಕೈಗಾರಿಕೆಗಳಿಗೆ ವಿಮಾನ ನಿಲ್ದಾಣ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹಿಂದಿನಿಂದ ನೆನೆಗುದಿಗೆ ಬಿದ್ದ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ವಿಮಾನ ನಿಲ್ದಾಣ ಪ್ರಾಧಿಕಾರವು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.

rcr airport 1

ಇಂದು ವಿಮಾನ ತಜ್ಞರಾಗಿರುವ ಕ್ಯಾಪ್ಟನ್ ಶಾಮಂತ ನೇತ್ರತ್ವದ ತಂಡ ಭೇಟಿ ನೀಡಿತು. ಈ ತಂಡವು ಈಗಾಗಲೇ ವಿಮಾನ ನಿಲ್ದಾಣಕ್ಕಾಗಿ ಗುರುತಿಸಿದ ವೈಟಿಪಿಎಸ್ ಪಕ್ಕದ ಭೂಮಿ ಪರಿಶೀಲಿಸಿದ್ದು, ಇಲ್ಲಿಯ ಚಿಮಣಿ ಹಾಗು ವಿದ್ಯುತ್ ಲೈನ್‍ಗಳು ಹಾಗು ಜುರಾಲಾದಿಂದ ಹೈ ಟೆನ್ಶನ್ ವಿದ್ಯುತ್ ಹಾಯ್ದು ಹೋಗುವುದರಿಂದ ಈ ಸ್ಥಳ ಎಷ್ಟು ಸೂಕ್ತ ಎಂಬ ಬಗ್ಗೆ ಪರಿಶೀಲಿಸಿತು.

ಈ ಹಿಂದೆ ಯರಮರಸ್ ಏಗನೂರು ಸೀಮಾಂತರದಲ್ಲಿ ವೈಟಿಪಿಎಸ್ ನಿರ್ಮಾಣವಾಗದ ಮುನ್ನ ವಿಮಾನ ನಿಲ್ದಾಣಕ್ಕಾಗಿ 420 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆದರೆ ವೈಟಿಪಿಎಸ್ ನಿರ್ಮಾಣದ ನಂತರ ಈ ಸ್ಥಳ ಸೂಕ್ತವಾಗಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ವೇಳೆ ರಾಯಚೂರು ತಾಲೂಕಿನ ಸಿಂಗನೋಡಿ ಬಳಿಯಲ್ಲಿ ಸುಮಾರು 600 ಎಕರೆ ಭೂಮಿ ಗುರುತಿಸಲಾಗುದ್ದು, ಇವುಗಳಲ್ಲಿ ಯಾವುದು ಸೂಕ್ತ ಹಾಗೂ ಆರ್ಥಿಕ ಹೊರೆ ಕಡಿಮೆಯಾಗಬಹುದು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ.

rcr airport

ಅಲ್ಲದೆ, ವೈಟಿಪಿಎಸ್ ಪಕ್ಕ ಗುರುತಿಸಿರುವ ಸ್ಥಳವು ಒಂದಿಷ್ಟು ಐತಿಹಾಸಿಕ ಮಹತ್ವ ಪಡೆದುಕೊಂಡಿದ್ದು, 1954ರಲ್ಲಿ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರು ರಾಯಚೂರು ಮಾರ್ಗವಾಗಿ ಹೋಗುವಾಗ ವಿಮಾನದಲ್ಲಿ ತಾಂತ್ರಿಕ ತೊಂದರೆಯಾಗಿ ಇದೇ ಸ್ಥಳದಲ್ಲಿ ವಿಮಾನ ಇಳಿಸಲಾಗಿತ್ತು. ಇದೇ ಕಾರಣಕ್ಕೆ ಇಲ್ಲಿಯೇ ವಿಮಾನ ನಿಲ್ದಾಣವಾಗಲಿ ಎಂಬ ವಾದವು ಇದೆ. ಇನ್ನೂ ಕೆಲವರು ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಆರಂಭವಾಗಿದೆ. ಕಲಬುರಗಿಗಿಂತ ಮೊದಲೇ ಪ್ರಸ್ತಾಪಿತವಾದ ರಾಯಚೂರು ವಿಮಾನ ನಿಲ್ದಾಣ ಎಲ್ಲಿಯಾದರೂ ಆಗಲಿ ಬೇಗ ಆರಂಭವಾಗಲಿ ಎಂದು ಜನರು ಆಶಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *