ಕನ್ನಡದ ಯುವ ಸಾಹಿತಿಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಲೇಖಕ ಗುರುರಾಜ ಕೊಡ್ಕಣಿ (Gururaj Kodkani) ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಸಾಹಿತ್ಯ ಕೃತಿಗಳನ್ನಷ್ಟೇ ಅಲ್ಲ ಬಾಲಿವುಡ್, ಕನ್ನಡ ಸಿನಿಮಾಗಳು ಸೇರಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ. ಈ ಬಾರಿ ಡಾ.ರಾಜ್ ಕುಮಾರ್ (Dr. Raj Kumar) ವ್ಯಕ್ತಿ ಹಾಗೂ ವ್ಯಕ್ತಿತ್ವ ಮತ್ತು ಸಿನಿಮಾ ನಟನೆಯ ಕುರಿತು ಅಣ್ಣಾವ್ರ ಹುಟ್ಟು ಹಬ್ಬದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
Advertisement
ಇತ್ತೀಚೆಗಷ್ಟೇ ಸುಮ್ಮನೇ ಯು ಟ್ಯೂಬ್‌ನಲ್ಲಿ ‘ಭಕ್ತ ಕುಂಬಾರ’ (Bhaktakumbara) ಸಿನಿಮಾ ನೋಡುತ್ತಿದ್ದೆ.ಅದರಲ್ಲಿ ನಾಮದೇವ ತನಗಿಂತ ಮಹಾನ್ ಪಾಂಡುರಂಗನ ಭಕ್ತನನ್ನು ಹುಡುಕುತ್ತ ಊರೂರು ಸುತ್ತುವ ದೃಶ್ಯ. ಅವರು ತಮ್ಮೂರಿಗೆ ಬಂದಿರುವ ಸುದ್ದಿ ತಿಳಿದು ಕಥಾನಾಯಕ ಓಡೋಡಿ ಬರುತ್ತಾನೆ. ನಾಮದೇವ ಮತ್ತು ಸಂಗಡಿಗರನ್ನು ಕಂಡವನೇ ಭುಜದ ಮೇಲಿನ ವಸ್ತ್ರವನ್ನು ಸೊಂಟಕ್ಕೆ ಸುತ್ತಿ ಉದ್ದಂಡ ನಮಸ್ಕಾರ ಮಾಡುತ್ತಾನೆ. ಎದ್ದು ನಿಂತವನು ಮುದುಡಿ ನಿಲ್ಲುತ್ತಾನೆ ಮುಖದಲ್ಲಿ ದೈನೇಸಿ ಭಾವ, ಆರ್ದ್ರ ಭಾವ, ಭಕ್ತಿ ಭಾವಗಳ ಸಮ್ಮೇಳನ. ಆತನ ವಿನಯತೆಗೆ ಹಿರಿಯೊಬ್ಬರು ಹೆಸರು ಕೇಳುತ್ತಾರೆ. ಹೆಸರು ಹೇಳುವ ಹೊತ್ತಿಗಾಗಲೇ ಭಾವುಕನಾಗುವ ಆತನ ಕಣ್ಗಳಲ್ಲಿ ಭಾಷ್ಪ. ಆ ಸಿನಿಮಾದಲ್ಲಿ ಅದೊಂದು ದೃಶ್ಯವನ್ನು ರಿವೈಂಡ್ ಮಾಡಿ ಎಷ್ಟು ಸಲ ನೋಡಿದ್ದೇನೊ ನೆನಪಿಲ್ಲ.
Advertisement
Advertisement
ಅದೊಂದು ಸಿನಿಮಾ ಎಂದಲ್ಲ. ಆದರೆ ರಾಜಕುಮಾರ್ ಅಭಿನಯದ ಅದೆಷ್ಟೋ ಸಿನಿಮಾಗಳು ಪರಿಪೂರ್ಣ ನಟನೆಯ ಉದಾಹರಣೆಗಳು ಎನ್ನುವುದಂತೂ ಸತ್ಯ. ಬಾಲ್ಯದಲ್ಲಿ ಭಯಂಕರ ವಿಷ್ಣುವರ್ಧನ ಅಭಿಮಾನಿಯಾಗಿದ್ದ ನನಗೆ ವೈಯಕ್ತಿಕವಾಗಿ ರಾಜಕುಮಾರ್ ಸಿನಿಮಾಗಳ ಮಹತ್ವ ಅರಿವಾಗಿದ್ದು ಕನ್ನಡ ಸಿನಿರಂಗ ಭಯಂಕರ ಬೆಳೆಯುತ್ತಿದೆ ಎನ್ನುವ ಭ್ರಮೆಯಲ್ಲಿ ನಡೆಯುವ ಕಾಲಕ್ಕೆ. ಎಲ್ಲ ಸೌಲಭ್ಯಗಳಿದ್ದುಕೊಂಡೂ ‘ನಾನು ಕೈ ಎತ್ತಿದರೆ ಪ್ರಳಯ ಆಗುತ್ತೆ, ಕಾಲೆತ್ತಿದರೆ ಸುನಾಮಿ ಬರುತ್ತೆ’ ಎನ್ನುವ ಮಹಾನಾಯಕರ ಸಿನಿಮಾಗಳ ಕಾಲಕ್ಕೂ ತುಂಬ ಮುಂಚಿನ ಕಾಲದವರು ನಟಸಾರ್ವಭೌಮ. ಆ ಕಾಲಕ್ಕೆ ತಮಗಿದ್ದ ಸೀಮಿತ ಸೌಲಭ್ಯಗಳಲ್ಲಿಯೇ ಅದ್ಭುತ ಸೃಷ್ಟಿಗಳನ್ನು ನಮ್ಮೆದುರಿಗಿಟ್ಟವರು ರಾಜ್. ಇದನ್ನೂ ಓದಿ:‘ಪುಷ್ಪ’ ಟೀಮ್‌ಗೆ ED ಶಾಕ್ ಕೊಟ್ಟ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ನಿರ್ಮಾಪಕ
Advertisement
ತೀರ ಕಮರ್ಷಿಯಲ್ ಎನ್ನಿಸುವ ಸಿನಿಮಾಗಳಲ್ಲಿಯೂ ಅದೆಷ್ಟೋ ಚಂದದ ಫಿಲಾಸಫಿಯನ್ನ , ಸಣ್ಣಸಣ್ಣ ಸಂದೇಶವನ್ನು ಕೊಟ್ಟವರು ರಾಜಣ್ಣ. ಕೆಲವು ಸಿನಿಮಾಗಳ ಸನ್ನಿವೇಶಗಳನ್ನು ನೋಡುವಾಗ ನನಗೆ ಕೇವಲ ರಾಜ್ ಮಾತ್ರವಲ್ಲದೇ ಸಾಮಾಜಿಕ ಅವ್ಯವಸ್ಥೆಗಳ ಕುರಿತು, ಸಮುದಾಯದ ಮನಸ್ಥಿತಿಯ ಕುರಿತು ಆವತ್ತಿನ ಸಿನಿರಂಗಕ್ಕಿದ್ದ ಸ್ಪಷ್ಟತೆಯ ಬಗೆಗೂ ಒಂದು ಮೆಚ್ಚುಗೆ ಹುಟ್ಟಿಕೊಳ್ಳುತ್ತದೆ. ಸುಮ್ಮನೇ ‘ಮೇಯರ್ ಮುತ್ತಣ್ಣ’ ಸಿನಿಮಾದ ದೃಶ್ಯಗಳನ್ನು ನೆನಪಿಸಿಕೊಳ್ಳಿ. ‘ಬಡತನದ ಗುಡಿಸಲುಗಳ ಮುಂದೆ ಕಸದ ತಿಪ್ಪೆಗಳು’ ಎನ್ನುತ್ತ ಸಿರಿವಂತರನ್ನು ದೂಷಿಸುವ ದ್ವಾರಕೀಶರನ್ನು ಕಂಡು ನಕ್ಕುಬಿಡುವ ಮುತ್ತಣ್ಣನನ್ನ ಕಲ್ಪಿಸಿಸಿಕೊಳ್ಳಿ. ‘ದೇವರು ಬಡತನ ಕೊಟ್ಟಿದಾನೆ ನಿಜ, ಆದರೆ ಕೊಳಕಾಗಿರಿ ಅಂತ ಹೇಳಿದಾನಾ..? ಇಷ್ಟು ಸಣ್ಣ ಗುಡಿಸಲನ್ನೇ ಸ್ವಚ್ಛವಾಗಿಟ್ಟುಕೊಳ್ಳೊಕೆ ಬರದವರು, ಅಷ್ಟು ದೊಡ್ಡ ಬಂಗಲೆಯನ್ನ ಸ್ವಚ್ಛವಾಗಿಟ್ಟುಕೊಳ್ಳೊಕೆ ಬರುತ್ತಾ’ ಎನ್ನುತ್ತ ನಿಮ್ಮ ಯೋಗ್ಯತೆಯೇ ಇಷ್ಟು ಕಣ್ರಯ್ಯಾ ಎನ್ನುವ ಧಾಟಿಯಲ್ಲಿ ವ್ಯಂಗ್ಯವಾಡುವ ರಾಜಕುಮಾರರ ಧಾಟಿಗೆ ಎಷ್ಟೋ ಸಲ ನನಗೆ ಅಚ್ಚರಿಯಾಗಿದ್ದಿದೆ.
ಬಡತನ ಶಾಪ, ಬಡವರು ಮಾಡಿದ್ದೆಲ್ಲವೂ ಸರಿಯೇ ಎಂಬ ಧೋರಣೆಯೇ ನಡುವೆ, ‘ಇಲ್ಲ, ತಪ್ಪು ನಿಮ್ಮಲ್ಲಿಯೂ ಇದೆ’ ಎಂದು ತೋರಿಸಿದ್ದು ಇದೇ ರಾಜಕುಮಾರ್ ಅಲ್ಲವಾ..? ಭಕ್ತ ಕುಂಬಾರ ಸಿನಿಮಾದಲ್ಲಿ ನಾಯಿಯೊಂದು ಅವರ ಬುತ್ತಿ ಕಸಿದು ಓಡುವಾಗ ಅದನ್ನು ನಿಲ್ಲಿಸಿ ಅದರೆದರು ಬುತ್ತಿ ಬಿಚ್ಚಿಟ್ಟು ನೀರು ತಂದುಕೊಟ್ಟು ,’ಇದರ ತೃಪ್ತಿ , ಪಾಂಡುರಂಗನ ತೃಪ್ತಿ’ ಎಂದಾಗ ಅದೆಷ್ಟು ಅಭಿಮಾನಿಗಳಲ್ಲೊಂದು ಪ್ರಾಣಿ ಪ್ರೀತಿ ಹುಟ್ಟಿಸಿರಲಿಕ್ಕೆ ಸಾಕು ರಾಜ್..? ಕೇವಲ ನಟನೆಯಿಂದ ಮಾತ್ರವಲ್ಲ. ಬಹುಶಃ ಇಂತಹಹತ್ತಾರು ಕಾರಣಗಳಿಗೂ ರಾಜಕುಮಾರ್ ಕನ್ನಡ ಸಿನಿರಂಗ ಕಂಡ ಅದ್ಭುತ ಕಲಾವಿದನೇ.