ಬೌಲರ್‌ಗಳ ಭರ್ಜರಿ ಬೇಟೆ, ಕೆ.ಎಲ್‌ ರಾಹುಲ್‌ ಫಿಫ್ಟಿ – ಆಸೀಸ್‌ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ಜಯ

Public TV
4 Min Read
KL Rahul 2

– ಭಾರತಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ

ಮುಂಬೈ: ಕೆ.ಎಲ್‌ ರಾಹುಲ್‌ (KL Rahul) ಜವಾಬ್ದಾರಿಯುತ ಅರ್ಧಶತಕ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ 5 ವಿಕೆಟ್‌ಗಳ ಜಯ ಸಾಧಿಸಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ (Team India) ಬೌಲರ್‌ಗಳ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ 35.4 ಓವರ್‌ಗಳಲ್ಲೇ 188 ರನ್‌ಗಳಿಗೆ ಸರ್ವಪತನಕಂಡಿತು. 189 ರನ್‌ಗಳ ಗುರಿ ಬೆನ್ನತ್ತಿದ ಭಾರತ ನಿಧಾನಗತಿಯ ಬ್ಯಾಟಿಂಗ್‌ನಿಂದ 39.5 ಓವರ್‌ಗಳಲ್ಲಿ 191 ರನ್‌ ಗಳಿಸಿ 5 ವಿಕೆಟ್‌ಗಳ ಜಯ ಸಾಧಿಸಿತು. ಇದನ್ನೂ ಓದಿ: ಸ್ವಿಮ್ಮಿಂಗ್ ಪೂಲ್‌ನಲ್ಲಿ ವಾಕ್ ಮಾಡಿದ ಪಂತ್ – ಬೇಗ ಗುಣಮುಖರಾಗಿ ಅಂದ್ರು ಫ್ಯಾನ್ಸ್

ಆಸ್ಟ್ರೇಲಿಯಾ ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೂ ಆರಂಭದಲ್ಲಿ ತೀವ್ರ ಆಘಾತ ಎದುರಾಗಿತ್ತು. ಅಗ್ರಕ್ರಮಾಂಕದ ಬ್ಯಾಟರ್‌ಗಳ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೆ.ಎಲ್‌. ರಾಹುಲ್‌, ರವೀಂದ್ರ ಜಡೇಜಾ ಹಾಗೂ ನಾಯಕ ಹಾರ್ದಿಕ್‌ ಪಾಂಡ್ಯ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಭಾರತ ಗೆಲುವು ಸಾಧಿಸಿತು.

ಆರಂಭಿಕರಾದ ಇಶಾನ್‌ ಕಿಶನ್‌ 3 ರನ್‌, ಶುಭಮನ್‌ ಗಿಲ್‌ 20 ರನ್‌ ಹಾಗೂ ಕೊಹ್ಲಿ 4 ರನ್‌ ಗಳಿಸಿದರೆ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್‌ ಯಾದವ್‌ (Suryakumar Yadav) ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಇದರಿಂದ ಭಾರತಕ್ಕೆ ಸೋಲಿನ ಆತಂಕ ಎದುರಾಗಿತ್ತು.

Australia 2 2

ರಾಹುಲ್‌ – ಜಡೇಜಾ ಶತಕದ ಜೊತೆಯಾಟ:
ಮಧ್ಯಂತರದಲ್ಲಿ ಕೆ.ಎಲ್‌ ರಾಹುಲ್‌ ಹಾಗೂ ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ಯಶಸ್ವಿಯಾದರು. ಇವರಿಬ್ಬರ ಜೊತೆಯಾಟದಿಂದ ತಂಡಕ್ಕೆ 55 ಎಸೆತಗಳಲ್ಲಿ 44 ರನ್‌ ಸೇರ್ಪಡೆಯಾಯಿತು. ಅಷ್ಟರಲ್ಲೇ ನಾಯಕ ಹಾರ್ದಿಕ್‌ ಪಾಂಡ್ಯ ಔಟಾಗಿ ಪೆವಿಲಿಯನ್‌ ಸೇರಿಕೊಂಡರು. ನಂತರ ಕಣಕ್ಕಿಳಿದ ಆಲ್‌ರೌಂಡರ್‌ ರವೀಂದ್ರ ಜಡೇಜಾ, ರಾಹುಲ್‌ ಜೊತೆಗೂಡಿ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಮುರಿಯದ 6ನೇ ವಿಕೆಟ್‌ಗೆ ಈ ಜೋಡಿ 123 ಎಸೆತಗಳಲ್ಲಿ 108 ರನ್‌ ಕಲೆಹಾಕಿತು. ರಾಹುಲ್‌ 91 ಎಸೆತಗಳಲ್ಲಿ 75 ರನ್‌ (7 ಬೌಂಡರಿ, 1 ಸಿಕ್ಸರ್‌) ಗಳಿಸಿದರೆ, ಜಡೇಜಾ 69 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 45 ರನ್‌ ಬಾರಿಸಿ ಅಜೇಯರಾಗುಳಿದರು.

ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟಾರ್ಕ್‌ 3 ವಿಕೆಟ್‌ ಪಡೆದರೆ, ಮಾರ್ಕ್ಸಸ್‌ ಸ್ಟೋನಿಸ್‌ 2 ವಿಕೆಟ್‌ ಕಿತ್ತರು. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಸ್ಟೆಪ್ ಹಾಕಿದ ಕಿಂಗ್ ಕೊಹ್ಲಿ – ವಿರಾಟ್ ಡಾನ್ಸ್‌ಗೆ ಅಭಿಮಾನಿಗಳು ಫಿದಾ

KL Rahul 1

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡವನ್ನು 36 ಓವರ್‌ಗಳ ಒಳಗೆ ಆಲ್‌ಔಟ್‌ ಮಾಡುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು.

ಡೇವಿಡ್‌ ವಾರ್ನರ್‌ ಅನುಪಸ್ಥಿತಿಯಲ್ಲಿ ಇನಿಂಗ್ಸ್‌ ಆರಂಭಿಸಿದ್ದ ಮಿಚೆಲ್‌ ಮಾರ್ಷ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿ 65 ಎಸೆತಗಳಲ್ಲಿ 81 ರನ್‌ ಬಾರಿಸುವ ಮೂಲಕ ಕಾಂಗರೂ ಪಡೆಗೆ ಭರ್ಜರಿ ಆರಂಭ ಒದಗಿಸಿದ್ದರು. ಇದರಿಂದ ಆಸ್ಟ್ರೇಲಿಯಾ ತಂಡ 300 ರನ್‌ ಗಡಿ ದಾಟುವ ಸಾಧ್ಯತೆಯಿತ್ತು. ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಕಾಂಗರೂ ಪಡೆ ಒಂದೊಂದೆ ವಿಕೆಟ್‌ ಕಳೆದುಕೊಂಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡವನ್ನು ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಓವರ್‌ಗಳಲ್ಲಿ ಆಲ್‌ಔಟ್‌ ಮಾಡಿದ ಇತಿಹಾಸ ನಿರ್ಮಿಸಿತು.

Team India 1 2

ಇನಿಂಗ್ಸ್‌ ಆರಂಭಿಸಿದ ಟ್ರಾವಿಸ್‌ ಹೆಡ್‌ 5 ರನ್‌ಗಳಿಸಿ ಮೊಹಮ್ಮದ್‌ ಸಿರಾಜ್‌ ಆಕ್ರಮಣಕಾರಿ ಬೌಲಿಂಗ್‌ಗೆ ಕ್ಲೀನ್‌ ಬೌಲ್ಡ್‌ ಆದರು. ನಂತರ ಮಿಚೆಲ್‌ ಮಾರ್ಷ್‌ ಮತ್ತು ಸ್ಟೀವ್‌ ಸ್ಮಿತ್‌ (Steve Smith) 72 ರನ್‌ಗಳ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ತಂದಿದ್ದರು. ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟುತ್ತಿದ್ದ ಸ್ಟೀವ್‌ ಸ್ಮಿತ್‌ ಅವರ ಆಟಕ್ಕೆ ನಾಯಕ ಹಾರ್ದಿಕ್‌ ಪಾಂಡ್ಯ ಬ್ರೇಕ್‌ ಹಾಕಿ ಪೆವಿಲಿಯನ್‌ಗೆ ದಾರಿ ತೋರಿಸಿದರು. ಕೀಪರ್‌ ಕೆ.ಎಲ್‌ ರಾಹುಲ್‌ ತೆಗೆದುಕೊಂಡ ಡೈವಿಂಗ್‌ ಕ್ಯಾಚ್‌ ಪರಿಣಾಮ 30 ಎಸೆತಗಳಲ್ಲಿ 22 ರನ್‌ ಗಳಿಸಿದ್ದ ಸ್ಮಿತ್‌ ಪೆವಿಲಿಯನ್‌ ಸೇರಬೇಕಾಯಿತು.

Team India 6

ಬಳಿಕ ಕೆಲಕಾಲ ಉತ್ತಮ ಬ್ಯಾಟಿಂಗ್‌ ಮಾಡುತ್ತಿದ್ದ ಮಿಚೆಲ್‌ ಮಾರ್ಷ್‌ 61 ಎಸೆತಗಳಲ್ಲಿ 81 ರನ್‌ (10 ಬೌಂಡರಿ, 5 ಸಿಕ್ಸರ್‌) ಚಚ್ಚಿ ರವೀಂದ್ರ ಜಡೇಜಾ ಸ್ಪಿನ್‌ ಬೌಲಿಂಗ್‌ ದಾಳಿಗೆ ತುತ್ತಾದರು. ನಂತರದಲ್ಲಿ ಬಂದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ ಒಂದೊಂದೆ ವಿಕೆಟ್‌ ಪತನಗೊಂಡಿತು. ಅಂತಿಮವಾಗಿ ಆಸ್ಟ್ರೇಲಿಯಾ 188 ರನ್‌ಗಳಿಗೆ ಆಲೌಟ್‌ ಆಯಿತು. ಜಾಶ್‌ ಇಂಗ್ಲಿಸ್‌ 26 ರನ್‌, ಕ್ಯಾಮರೂನ್‌ ಗ್ರೀನ್‌ 12 ರನ್‌ ಗಳಿಸಿದರು.

ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಬೌಲರ್‌ಗಳು ಭರ್ಜರಿ ಬೇಟೆಯಾಡಿದರು. ವೇಗಿಗಳಾದ ಮೊಹಮ್ಮದ್‌ ಶಮಿ 6 ಓವರ್‌ಗಳಲ್ಲಿ 17 ರನ್‌ ನೀಡಿ 3 ವಿಕೆಟ್‌ ಪಡೆದರೆ, ಮೊಹಮ್ಮದ್‌ ಸಿರಾಜ್‌ 5.4 ಓವರ್‌ಗಳಲ್ಲಿ 29 ರನ್‌ ನೀಡಿ 3 ವಿಕೆಟ್‌ ಕಿತ್ತರು. ರವೀಂದ್ರ ಜಡೇಜಾ ಸ್ಪಿನ್‌ ಜಾದುವಿನಿಂದ 2 ವಿಕೆಟ್‌ ಪಡೆದರೆ, ಹಾರ್ದಿಕ್‌ ಪಾಂಡ್ಯ, ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ತೃಪ್ತಿಪಟ್ಟುಕೊಂಡರು.

Australia 8

ಆಸ್ಟ್ರೇಲಿಯಾಗೆ ಗಾಯದ ಮೇಲೆ ಬರೆ: ಡೇವಿಡ್‌ ವಾರ್ನರ್‌ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್‌ ಆರಂಭಿಸಿದ ಸ್ಟೀವ್‌ ಸ್ಮಿತ್‌ ಸಾರಥ್ಯದ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ಸಮಸ್ಯೆ ಎದುರಾಗಿತ್ತು. ವಿಕೆಟ್‌ಕೀಪರ್‌ ಬ್ಯಾಟ್ಸ್‌ ಮ್ಯಾನ್‌ ಅಲೆಕ್ಸ್‌ ಕೇರಿ ಅನಾರೋಗ್ಯದ ಕಾರಣ ಕ್ರೀಡಾಂಗಣಕ್ಕೂ ಬಾರದೇ ಹೋಟೆಲ್‌ನಲ್ಲೇ ಉಳಿದುಕೊಂಡರು. ಇದು ತಂಡಕ್ಕೆ ಮತ್ತಷ್ಟು ಸಮಸ್ಯೆ ತಂದೊಡ್ಡಿತ್ತು.

Share This Article
Leave a Comment

Leave a Reply

Your email address will not be published. Required fields are marked *