– 4ನೇ ಬಾರಿಗೆ U19 ವಿಶ್ವಕಪ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ
ಕ್ಯಾನ್ಬೆರಾ: 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾ ವಿರುದ್ಧ 79 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ 14 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಜೊತೆಗೆ 4ನೇ ಬಾರಿಗೆ ಅಂಡರ್ 19 ವಿಶ್ವಕಪ್ ಕಿರೀಟ ತನ್ನದಾಗಿಸಿಕೊಂಡಿದೆ.
1988ರಲ್ಲಿ ನಡೆದ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ, 2002 & 2010ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆ ನಂತರ 2012 ಮತ್ತು 2018ರಲ್ಲಿ ಫೈನಲ್ ತಲುಪಿದ್ದರೂ ಭಾರತದ ವಿರುದ್ಧವೇ ಸೋತು ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು.
2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ತವರಿನಲ್ಲೇ ಟೀಂ ಇಂಡಿಯಾ ಸೋಲಿಸಿ ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿತ್ತು. ಶತಕೋಟಿ ಭಾರತೀಯರ ಕನಸನ್ನು ಭಗ್ನಗೊಳಿಸುವ ಜೊತೆಗೆ ಮೂರನೇ ಬಾರಿ ವಿಶ್ವಕಪ್ ಗೆಲ್ಲಬೇಕೆಂಬ ಟೀಂ ಇಂಡಿಯಾದ ಕನಸನ್ನೂ ನುಚ್ಚುನೂರು ಮಾಡಿತ್ತು. 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ 6ನೇ ಬಾರಿ ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. ಈ ಮೂಲಕ 6 ಬಾರಿ ವಿಶ್ವಕಪ್ ಗೆದ್ದ ಏಕೈಕ ತಂಡವಾಗಿ ಆಸ್ಟ್ರೇಲಿಯಾ ಹೊರಹೊಮ್ಮಿತ್ತು. ಇದೀಗ ಮತ್ತೊಮ್ಮೆ ಭಾರತದ ವಿಶ್ವಕಪ್ ಕನಸು ಭಗ್ನಗೊಂಡಿದೆ.
ಸತತ 5ನೇ ಬಾರಿ ಫೈನಲ್, 2 ಬಾರಿ ಚಾಂಪಿಯನ್:
ಭಾರತ ಕಿರಿಯರ ತಂಡ 2016 ರಿಂದ 2024ರ ವರೆಗೆ ನಡೆದಿರುವ ಎಲ್ಲಾ ಐಸಿಸಿ ಅಂಡರ್ 19 ವಿಶ್ವಕಪ್ನಲ್ಲಿ ಫೈನಲ್ ಪ್ರವೇಶಿಸಿದೆ. 2016ರಲ್ಲಿ ವಿಂಡೀಸ್ ವಿರುದ್ಧ, 2020ರಲ್ಲಿ ಬಾಂಗ್ಲಾದೇಶದ ವಿರುದ್ಧ ಫೈನಲ್‌ನಲ್ಲಿ ಸೋಲುಕಂಡರೆ, 2018ರಲ್ಲಿ ಪೃಥ್ವಿ ಶಾ ನೇತೃತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ 2022ರಲ್ಲಿ ಯಶ್ ಧುಲ್ ನೇತೃತ್ವದ ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಹಿಂದೆ 2000ನೇ ಇಸವಿಯಲ್ಲಿ ಮೊಹಮ್ಮದ್ ಕೈಫ್, 2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, 2012ರಲ್ಲಿ ಉನ್ಮುಕ್ ಚಂದ್ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡ 2006ರಲ್ಲಿ ಪಾಕಿಸ್ತಾನದ ಎದುರು ಫೈನಲ್‌ನಲ್ಲಿ ಸೋಲು ಕಂಡಿತ್ತು.
ಭಾನುವಾರ ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿ, ಭಾರತಕ್ಕೆ 254 ರನ್‌ಗಳ ಗುರಿ ನೀಡಿತ್ತು. ಆದ್ರೆ ಆಸೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ 43.5 ಓವರ್‌ಗಳಲ್ಲಿ ಕೇಲವ 174 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಆಸೀಸ್ ತಂಡ 4ನೇ ಬಾರಿಗೆ ಐಸಿಸಿ ಅಂಡರ್ 19 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಸಾಧಾರಣ ಮೊತ್ತದ ಚೇಸಿಂಗ್ ಆರಂಭಿಸಿದ ಟೀಂ ಇಂಡಿಯಾ ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತು. ಇದರೊಂದಿಗೆ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಭಾರತದ ಪರ ಆದರ್ಶ್ ಸಿಂಗ್ 47 ರನ್, ಮುಶೀರ್ ಖಾನ್ 22 ರನ್, ಮುರುಗನ್ ಅಭಿಷೇಕ್ 42 ರನ್ ಗಳಿಸಿದ್ದು ಬಿಟ್ಟರೇ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಪರಿಣಾಮ ಭಾರತ ಹೀನಾಯ ಸೋಲನುಭವಿಸಿತು.
ಇದಕ್ಕೂ ಮುನ್ನ ಆಸೀಸ್ ಪರ ಬ್ಯಾಟಿಂಗ್ ಮಾಡಿದ ಹ್ಯಾರಿ ಡಿಕ್ಸನ್ 56 ಎಸೆತಗಳಲ್ಲಿ 42 ರನ್ ಗಳಿಸಿದ್ರೆ, ಹಗ್ ವೈಬ್ಜೆನ್ 48 ರನ್, ಹರ್ಜಾಸ್ ಸಿಂಗ್ 55 ರನ್ (3 ಬೌಂಡರಿ, 3 ಸಿಕ್ಸರ್), ರಿಯಾನ್ ಹಿಕ್ಸ್ 20 ರನ್, ರಾಫ್ ಮ್ಯಾಕ್‌ಮಿಲನ್ 2 ರನ್, ಚಾರ್ಲಿ ಆಂಡರ್ಸನ್ 13 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನೂ ಕೊನೆಯಲ್ಲಿ ಆಲಿವರ್ ಪೀಕ್ 46 ರನ್, ಟಾಮ್ ಸ್ಟ್ರೇಕರ್ 8 ರನ್ ಗಳಿಸಿ ಅಜೇಯರಾಗುಳಿದರು.
ಇನ್ನೂ ಆಸೀಸ್ ಪರ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ ವೇಗಿ ರಾಜ್ ಲಿಂಬಾನಿ 10 ಓವರ್‌ಗಳಲ್ಲಿ 38 ರನ್ ಬಿಟ್ಟುಕೊಟ್ಟು 3 ರನ್ ಪಡೆದರು. ನಮನ್ ತಿವಾರಿ 2 ವಿಕೆಟ್, ಸೌಮಿ ಪಾಂಡೆ ಹಾಗೂ ಮುಶೀರ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.