ಲಕ್ನೋ: ಆ್ಯಡಂ ಜಂಪಾ (Adam Zampa) ಸ್ಪಿನ್ ಮೋಡಿ ಹಾಗೂ ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್ ಬ್ಯಾಟಿಂಗ್ ಅಬ್ಬರಕ್ಕೆ ಮಂಕಾದ ಲಂಕಾ, ಆಸೀಸ್ (Australia vs Sri Lanka) ವಿರುದ್ಧ ಹೀನಾಯ ಸೋಲನುಭವಿಸಿದೆ. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಆಸ್ಟ್ರೇಲಿಯಾ ಸೋಮವಾರದ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದೆ. ಅಂತೆಯೇ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದ್ದ ಶ್ರೀಲಂಕಾ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ.
Advertisement
ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್‌ಗಳಾದ ಪಥುಮ್ ನಿಸಾಂಕ ಮತ್ತು ಕುಶಾಲ ಪೆರೆರಾ (Kusal Perera) ಹೊರತುಪಡಿಸಿ ಉಳಿದೆಲ್ಲ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದ ಕೇವಲ 209 ರನ್‌ಗಳಿಗೆ ಆಲೌಟ್ ಆಯಿತು. 210 ರನ್‌ಗಳ ಗುರಿ ಬೆನ್ನತ್ತಿದ ಆಸೀಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 35.2 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 215 ರನ್‌ಗಳನ್ನು ಬಾರಿಸಿ ಗೆಲುವು ದಾಖಲಿಸಿತು. ಇದನ್ನೂ ಓದಿ: 2028 ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ
Advertisement
Advertisement
ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ತಂಡಕ್ಕೆ ಶುಭಾರಂಭ ನೀಡಿದರು. ಲಂಕಾ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದ ಮಾರ್ಷ್ ಅರ್ಧ ಶತಕ ಬಾರಿಸಿದರು. 52 (51 ಬಾಲ್, 9 ಫೋರ್) ರನ್‌ಗಳಿಸಿದ್ದ ಅವರು ಒಂದು ರನ್ ಕದಿಯಲು ಹೋಗಿ ರನೌಟ್ ಆದರು. ತಂಡದ ಗೆಲುವಿನ ಭರವಸೆಯೊಂದಿಗೆ ಆಡುತ್ತಿದ್ದ ಡೇವಿಡ್ ವಾರ್ನರ್ ಕೇವಲ 11 ರನ್ ಗಳಿಸಿ ಎಲ್‌ಬಿಡಬ್ಲ್ಯೂ ಆಗಿ ಔಟಾದರು. 5 ಬಾಲ್‌ಗಳನ್ನು ಬೀಟ್ ಮಾಡಿದ್ದ ಸ್ಟೀವನ್ ಸ್ಮಿತ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.
Advertisement
ವಾರ್ನರ್ ಮತ್ತು ಸ್ಮಿತ್ ಪೆವಿಲಿಯನ್ ಪರೇಡ್ ನಡೆಸಿದ್ದು ತಂಡಕ್ಕೆ ಕೊಂಚ ಭೀತಿ ತಂದಿತ್ತು. ಆದರೆ ಮಾರ್ನಸ್ ಲಾಬುಶೇನ್ ಮತ್ತು ಜೋಶ್ ಇಂಗ್ಲಿಸ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ಹಾದಿಯತ್ತ ಮುನ್ನಡೆಸಿದರು. ಲಾಬುಶೇನ್ 40 ರನ್ (60 ಬಾಲ್, 2 ಫೋರ್) ಗಳಿಸಿ ದಿಲ್ಶಾನ್ ಮಧುಶಂಕಾ ಬೌಲಿಂಗ್‌ನಲ್ಲಿ ಚಮಿಕಾ ಕರುಣಾರತ್ನೆಗೆ ಕ್ಯಾಚ್ ನೀಡಿ ಔಟಾದರು. ಅರ್ಧಶತಕ ಗಳಿಸಿ ಮಿಂಚಿದ ಜೋಶ್ ಇಂಗ್ಲಿಸ್ 59 ಬಾಲ್‌ಗಳಿಗೆ 58 ರನ್ ಗಳಿಸಿ (5 ಫೋರ್, 1 ಸಿಕ್ಸ್) ತಂಡದ ಗೆಲುವಿಗೆ ನೆರವಾದರು. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಲಂಕಾ ಬೌಲರ್‌ಗಳನ್ನು ಬೆಂಡೆತ್ತಿ 21 ಬಾಲ್‌ಗಳಿಗೆ 31 ರನ್ ಗಳಿಸಿ (4 ಫೋರ್, 2 ಸಿಕ್ಸ್) ರನ್‌ಗಳಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಮ್ಯಾಕ್ಸ್‌ವೆಲ್ (Glenn Maxwell) ಜೊತೆ ಗೆಲುವಿಗೆ ಸಾಥ್ ನೀಡಿದ ಮಾರ್ಕಸ್ ಸ್ಟೊಯಿನಿಸ್ 10 ಬಾಲ್‌ಗಳಿಗೆ 20 ರನ್ ಕಲೆ ಹಾಕಿ (2 ಫೋರ್, 1 ಸಿಕ್ಸ್) ನಾಟೌಟ್ ಆಗಿ ಉಳಿದರು. ಬ್ಯಾಟರ್‌ಗಳ ಉತ್ತಮ ಪ್ರದರ್ಶನದಿಂದ ಆಸ್ಟ್ರೇಲಿಯಾ ತಂಡ 35.2 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ ಶ್ರೀಲಂಕಾ ವಿರುದ್ಧ ಗೆಲುವು ದಾಖಲಿಸಿತು.
ದಿಲ್ಶಾನ್ ಮಧುಶಂಕಾ 3 ಹಾಗೂ ದುನಿತ್ ವೆಳಾಲಗೆ 1 ವಿಕೆಟ್ ಪಡೆದಿದ್ದು ಹೊರತು ಪಡಿಸಿದರೆ ಶ್ರೀಲಂಕಾ ಬೌಲರ್‌ಗಳು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಇದನ್ನೂ ಓದಿ: ಸಿಕ್ಸರ್ ಗುಟ್ಟು ಬಿಚ್ಚಿಟ್ಟ ರೋಹಿತ್ ಶರ್ಮಾ
ಪೆರೆರಾ, ನಿಸಾಂಕ ಅರ್ಧಶತಕ ವ್ಯರ್ಥ
ಟಾಸ್ ಗೆದ್ದ ಶ್ರೀಲಂಕಾ ತಂಡ ಆಸೀಸ್ ವಿರುದ್ಧ ಬ್ಯಾಟಿಂಗ್ ಆಯ್ದುಕೊಂಡಿತು. ಲಂಕಾದ ಆರಂಭಿಕ ಬ್ಯಾಟರ್ಸ್ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ ಪತನಕ್ಕೆ 125 ರನ್ ಜೊತೆಯಾಟ ಆಡಿದ ಪಥುಮ್ ನಿಸಾಂಕ ಹಾಗೂ ಕುಶಾಲ್ ಪೆರೆರಾ ಆಸೀಸ್ ಬೌಲರ್ಸ್‌ಗಳನ್ನು ಕಾಡಿದರು. ಪಥುಮ್ ನಿಸಾಂಕ 61 ರನ್ (67 ಬಾಲ್, 8 ಫೋರ್) ಗಳಿಸಿದರೆ, ಕುಶಾಲ್ ಪೆರೆರಾ 78 ರನ್ (82 ಬಾಲ್, 12 ಬೌಂಡರಿ)ಬಾರಿಸಿ ಪ್ಯಾಟ್ ಕಮ್ಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಉತ್ತಮ ಆರಂಭದ ಹೊರತಾಗಿಯೂ ತಂಡ ಸ್ಥಿರ ಪ್ರದರ್ಶನ ನೀಡಲು ವಿಫಲವಾಯಿತು.
ಆಸ್ಟ್ರೇಲಿಯಾ ಬೌಲಿಂಗ್ ಎದುರು ನಿಲ್ಲಲಾಗದೆ ಲಂಕಾ ವಿಕೆಟ್‌ಗಳು ಒಂದಾದ ಮೇಲೆ ಒಂದರಂತೆ ಬೀಳತೊಡಗಿತು. ಕುಶಾಲ್ ಮೆಂಡಿಸ್ 9 ರನ್ ಗಳಿಸಿ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ನಾಲ್ಕನೇ ಕ್ರಮಾಂಕದ ಸದೀರ ವಿಕ್ರಮ 8 ರನ್ ಗಳಿಸಿ ಎಲ್‌ಬಿಡಬ್ಲ್ಯೂ ಆಗಿ ನಿರಾಸೆ ಮೂಡಿಸಿದರು. 32.1 ಆಗಿದ್ದ ಸಂದರ್ಭ ಮಳೆ ಕಾಣಿಸಿಕೊಂಡ ಪರಿಣಾಮ ಪಂದ್ಯವನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು. ಮಳೆ ನಿಂತ ಮೇಲೆ ಬ್ಯಾಟಿಂಗ್ ಆರಂಬಿಸಿದ ಲಂಕಾ ಬ್ಯಾಟರ್ಸ್ ಅಕ್ಷರಶಃ ಪರದಾಡಿದರು. ಧನಂಜಯ್ ಡಿಸಿಲ್ವ (7) ಚಮಿಕಾ ಕರುಣಾರತ್ನೆ (2) ಗಳಿಸಿ ವಿಕೆಟ್ ಕೈಚೆಲ್ಲಿದರು. ದುನಿತ್ ವೆಳಾಲಗೆ 2 ರನ್ ಗಳಿಸಿ ರನ್ ಕದಿಯಲು ಮುಂದಾಗಿ ರನೌಟ್ ಆದರು. ಮಹೇಶ ತೀಕ್ಷಣ ಶೂನ್ಯಕ್ಕೆ ಎಲ್‌ಬಿಡಬ್ಲ್ಯೂ ಆದರು. ಲಾಹಿರು ಕುಮಾರ 4 ರನ್‌ಗೆ ಬೌಲ್ಡ್ ಆಗಿ ಕ್ರೀಸ್ ತೊರೆದರು. ಒಂದು ಕಡೆ ವಿಕೆಟ್‌ಗಳ ಪತನ ಆಗುತ್ತಿದ್ದರೂ ಚರಿತ್ ಹಸಲಂಕ 25 ರನ್ ಗಳಿಸಿ ರಕ್ಷಣಾತ್ಮಕ ಆಟದ ಪ್ರಯತ್ನದಲ್ಲಿದ್ದರು. ಆದರೆ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಔಟಾಗಿ ನಿರಾಸೆ ಮೂಡಿಸಿದರು. ಆ ಮೂಲಕ ಶ್ರೀಲಂಕಾ 209 ರನ್‌ಗೆ ಆಲೌಟ್ ಆಯಿತು. ಇದನ್ನೂ ಓದಿ: ಪಾಕ್ ಕ್ರಿಕೆಟಿಗರಿಗೆ ಜೈ ಶ್ರೀರಾಮ್ ಘೋಷಣೆ: ಉದಯನಿಧಿ ಆಕ್ಷೇಪ
ಆಸ್ಟ್ರೇಲಿಯಾ ಪರ ಉತ್ತಮ ಪ್ರದರ್ಶನ ನೀಡಿದ ಆ್ಯಡಂ ಜಂಪಾ 4 ವಿಕೆಟ್ ಕಬಳಿಸಿ ಮಿಂಚಿದರೆ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ತಲಾ 2, ಗ್ಲೆನ್ ಮ್ಯಾಕ್ಸ್‌ವೆಲ್ 1 ವಿಕೆಟ್ ಪಡೆದರು.
Web Stories