– 10 ವರ್ಷಗಳ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ
– ವೇಗಿ ಜಸ್ಪ್ರೀತ್ ಬುಮ್ರಾಗೆ ಸರಣಿ ಶ್ರೇಷ್ಠ ಪ್ರಶಸ್ತಿ
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಕ್ತಾಯಗೊಂಡಿದ್ದು, ಅತಿಥೇಯ ಆಸ್ಟ್ರೇಲಿಯಾ ತಂಡ 3-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಈ ಮೂಲಕ 10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಗೆದ್ದ ವಿಶೇಷ ಸಾಧನೆಯನ್ನೂ ಕಾಂಗರೂ ಪಡೆ ಮಾಡಿದೆ.
ಈ ಮೂಲಕ ಸತತ 2ನೇ ಬಾರಿಗೆ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದೆ. ಪ್ರಸಕ್ತ ವರ್ಷ ಇಂಗ್ಲೆಂಡ್‌ನ ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟಕ್ಕಿಳಿಯಲಿದೆ. 2021-23ರ ಆವೃತ್ತಿಯಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಆಸ್ಟ್ರೇಲಿಯಾ ಟೀಂ ಇಂಡಿಯಾ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು.
Advertisement
ಸೂಪರ್ ಸಂಡೇ ಸಿಡ್ನಿಯಲ್ಲಿ ಪವಾಡವೇ ನಡೆಯಬಹುದು ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾದುಕುಳಿತಿದ್ದರು. ಒಂದಂತದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆ ರೀತಿಯ ಆಸೆಯನ್ನೂ ಹುಟ್ಟಿಸಿದ್ದರು. ಆದ್ರೆ ಭಾರತದ ವಿರುದ್ಧ ಮತ್ತೆ ಸಿಡಿದ ಟ್ರಾವಿಸ್ ಹೆಡ್ ಮತ್ತು ಮೊದಲನೇ ಪಂದ್ಯದಲ್ಲೇ ತನ್ನ ಸಾಮರ್ಥ್ಯ ಸಾಬೀತು ಪಡಿಸಿದ ಬ್ಯೂ ವೆಬ್‌ಸ್ಟರ್ ಅದಕ್ಕೆ ಅವಕಾಶ ನೀಡದಂತೆ ಮಾಡಿದರು.
Advertisement
ಗೆಲುವಿಗೆ ಕೇವಲ 162 ರನ್‌ಗಳ ಗುರಿ ಪಡೆದಿದ್ದ ಆಸ್ಟ್ರೇಲಿಯಾ ತಂಡ ಆರಂಭದಿಂದಲೇ ಏಕದಿನ ಶೈಲಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಇಳಿಯಿತು. ಮತ್ತೊಂದೆಡೆ ಗಾಯದ ಸಮಸ್ಯೆಯಿಂದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ಆಸ್ಟ್ರೇಲಿಯಾ ತಂಡಕ್ಕೆ ಅನುಕೂಲವೇ ಆಯಿತು.
Advertisement
ಲಯ ತಪ್ಪಿದ ಸಿರಾಜ್
ಬುಮ್ರಾ ಅನುಪಸ್ಥಿತಿಯಲ್ಲಿ ಆರಂಭಿಕ ಬೌಲರ್ ಆಗಿ ಕಣಕ್ಕಿಳಿದ ಸಿರಾಜ್ ಮೊದಲ ಓವರ್‌ನಲ್ಲೇ 13 ರನ್ ಚಚ್ಚಿಸಿಕೊಂಡರು. ಅತ್ತ ಆಸ್ಟ್ರೇಲಿಯಾ ಪಾಳಯದಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು. ಇದು ಸಾಲದೆಂಬಂತೆ ಪ್ರಸಿದ್ಧ್ ಕೃಷ್ಣ ಅವರು ಮುಂದಿನ ಓವರ್ ನಲ್ಲಿ ಮತ್ತೆ 13 ರನ್ ಗಳನ್ನು ನೀಡಿ ಆಸೀಸ್ ಹಾದಿಯನ್ನು ಮತ್ತಷ್ಟು ಸುಗಮಗೊಳಿಸಿದರು. ಈ ಹಂತದಲ್ಲಿ ಇಬ್ಬರು ಬೌಲರ್‌ಗಳು ಅಡ್ಡಾದಿಡ್ಡಿ ಬೌಲಿಂಗ್ ಮಾಡುವುದನ್ನ ನೋಡಿಗಾದ ಪಂದ್ಯ ಬಹಳ ಬೇಗ ಮುಗಿಯುವ ಲಕ್ಷಣಗಳು ಕಂಡು ಬಂದಿತ್ತು.
Advertisement
4ನೇ ಓವರ್ ನಲ್ಲಿ 17 ಎಸೆತಗಳಿಂದ 22 ರನ್ ಗಳನ್ನು ಗಳಿಸಿದ ಸ್ಯಾಮ್ ಕಾನ್‌ಸ್ಟಾಸ್ ಅವರನ್ನು ಪ್ರಸಿದ್ಧ ಕೃಷ್ಣ ಪೆವಿಲಿಯನ್‌ಗಟ್ಟಿದರು. ಜೊತೆಗೆ ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಆಸ್ಟ್ರೇಲಿಯಾ 58 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಾಗ ಗೆಲುವಿನ ಹಾದಿ ಇನ್ನೂ ಸಾಧ್ಯವಿದೆ ಎಂದೇ ಭಾವಿಸಲಾಗಿತ್ತು. ಆದ್ರೆ ಮತ್ತೆ ಟೀಂ ಇಂಡಿಯಾ ಕಾಡಿದ ಟ್ರಾವಿಸ್ ಹೆಡ್ ಹಾಗೂ ವೆಬ್‌ಸ್ಟರ್ ವಿಕೆಟ್ ಬಿಟ್ಟುಕೊಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು 6 ವಿಕೆಟ್‌ಗೆ 141 ರನ್ ಗಳಿಸಿ 145 ರನ್‌ಗಳ ಮುನ್ನಡೆ ಕಾಯ್ಡುಕೊಂಡಿದ್ದ ಭಾರತ ತಂಡ ಭಾನುವಾರ ಬೆಳಗ್ಗೆ ಸ್ಪರ್ಧಾತ್ಮಕ ಮೊತ್ತ ಪೇರಿಸಬಹುದು ಎಂಬ ನಿರೀಕ್ಷೆ ಸುಳ್ಳಾಯಿತು. ರವೀಂದ್ರ ಜಡೇಜಾ (13) ಮತ್ತು ವಾಶಿಂಗ್ಟನ್ ಸುಂದರ್ (12) ವಿಕೆಟ್ ಬೇಗನೇ ಕಳೆದುಕೊಂಡರು. ಬಾಲಂಗೋಚಿಗಳೂ ಸಹ ಆಸ್ಟ್ರೇಲಿಯಾ ಬೌಲಿಂಗ್ ತಾಪದ ವಿರುದ್ಧ ನಿಲ್ಲಲು ಸಾಧ್ಯವಾಗಲೇ ಇಲ್ಲ. ಹೀಗಾಗಿ 157 ರನ್ ಗಳಿಗೆ ಭಾರತ ಆಲೌಟ್ ಆಯಿತು. ಪ್ರಥಮ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದಿದ್ದ ಸ್ಕಾಟ್ ಬೋಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರು. ಉಳಿದೊಂದು ವಿಕೆಟ್ ವೆಬ್‌ಸ್ಟರ್ ಪಾಲಾಯಿತು.
ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 10 ವಿಕೆಟ್ ಪಡೆದ ಆಸ್ಚ್ರೇಲಿಯಾದ ವೇಗಿ ಸ್ಕಾಟ್ ಬೋಲೆಂಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಒಟ್ಟು 32 ವಿಕೆಟ್ ಉರುಳಿಸಿದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ ಪ್ರಥಮ ಇನ್ನಿಂಗ್ಸ್ 72.2 ಓವರ್ ಗಳಲ್ಲಿ 185 ರನ್
ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್ 51 ಓವರ್ ಗಳಲ್ಲಿ 181 ರನ್
ಭಾರತ ದ್ವಿತೀಯ ಇನ್ನಿಂಗ್ಸ್ 39.5 ಓವರ್ ಗಳಲ್ಲಿ 157 ರನ್
ಆಸ್ಚ್ರೇಲಿಯಾ 27 ಓವರ್ ಗಳಲ್ಲಿ 162/4